ಮಡಿಕೇರಿ, ಡಿ. ೨೬: ಕೃಷಿ ಹೊಂಡ ನಿರ್ಮಾಣ ಸಂದರ್ಭ ನೈಸರ್ಗಿಕವಾಗಿ ಹರಿಯುತ್ತಿದ್ದ ತೋಡಿಗೆ ಮಣ್ಣು ಹಾಕಿ ಮುಚ್ಚಿದ್ದರಿಂದ ತೋಡಿನ ನೀರು ತೋಟ, ಗದ್ದೆಗಳಲ್ಲಿ ಹರಿದು ಹಾನಿಯುಂಟಾಗುತ್ತಿರುವ ಸನ್ನಿವೇಶ ಮರಗೋಡುವಿನಲ್ಲಿ ಗೋಚರಿಸಿದೆ.

ಅಲ್ಲಿನ ನಿವಾಸಿ ಕೆ.ಎ. ಕುಶಾಲಪ್ಪ ಎಂಬವರಿಗೆ ಕೃಷಿ ಇಲಾಖೆ ವತಿಯಿಂದ ಕೃಷಿ ಹೊಂಡ ಮಂಜೂರಾಗಿದೆ. ಕೃಷಿ ಹೊಂಡ ನಿರ್ಮಾಣ ಮಾಡುವ ಸಂದರ್ಭ ಸನಿಹದಲ್ಲೇ ಹರಿಯುತ್ತಿದ್ದ ತೋಡಿಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದಾಗಿ ಎಂ.ಎಸ್.ದೇವಯ್ಯ ಹಾಗೂ ಸಹೋದರರರಿಗೆ ಸೇರಿದ ಜಾಗದಲ್ಲಿ ತೋಡಿನ ನೀರು ಹರಿಯುತ್ತಿದ್ದು, ಗದ್ದೆ, ತೋಟಗಳಿಗೆ ಹಾನಿಯಾಗುತ್ತಿದೆ. ಈ ಬಗ್ಗೆ ದೇವಯ್ಯ ಅವರು ಕೃಷಿ ಇಲಾಖೆ ಅಧಿಕಾರಿಗಳಲ್ಲಿ ಸಮಜಾಯಿಷಿಕೆ ಬಯಸಿದ ಸಂದರ್ಭ ಅಧಿಕಾರಿಗಳು ಇಲಾಖೆ ವತಿಯಿಂದ ಕೃಷಿ ಹೊಂಡ ಮಾಡಿರುವದಿಲ್ಲ, ಕುಶಾಲಪ್ಪ ಅವರು ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿರುವದಾಗಿ ಉತ್ತರ ನೀಡಿದ್ದಾರೆ.

ಆದರೆ, ಕೃಷಿ ಇಲಾಖೆಯ ಫಲಾನುಭವಿಗಳ ಪಟ್ಟಿಯಲ್ಲಿ ಕುಶಾಲಪ್ಪ ಅವರ ಹೆಸರಿದೆ. ಅಲ್ಲದೆ, ತೋಡು ಇರುವ ಬಗ್ಗೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಆ ಪ್ರದೇಶದಲ್ಲಿ ಯಾವದೇ ತೋಡು ಇರಲಿಲ್ಲವೆಂದು ಉತ್ತರ ನೀಡಿದ್ದಾರೆ. ಆದರೆ ಸರಕಾರಿ ನಕಾಶೆಯಲ್ಲಿ ತೋಡು ಇರುವದು ಕಂಡುಬರುತ್ತದೆ. ನೈಸರ್ಗಿಕವಾಗಿ ಹರಿಯುತ್ತಿದ್ದ ತೋಡನ್ನೇ ಇಲ್ಲವೆಂದು ಹೇಳುವ, ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದ್ದರೂ ಕೃಷಿ ಹೊಂಡ ಮಂಜೂರು ಮಾಡಿಲ್ಲವೆಂದು ಅಧಿಕಾರಿಗಳ ದ್ವಂದ್ವ ಉತ್ತರದ ಬಗ್ಗೆ ಸಂಶಯಗೊAಡ ದೇವಯ್ಯ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮನವಿ ಸಲ್ಲಿಸಿದ್ದಾರೆ. ಮುಚ್ಚಿ ಹೋಗಿರುವ ತೋಡನ್ನು ತೆರವುಗೊಳಿಸಿಕೊಡುವಂತೆ ಮನವಿಯಲ್ಲಿ ಕೋರಿಕೊಂಡಿದ್ದಾರೆ.