ಶನಿವಾರಸಂತೆ, ಡಿ. ೨೫: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನಹಳ್ಳಿ ಗ್ರಾಮದ ಕುರುಬ ಜನಾಂಗದ ಕೂಲಿ ಕಾರ್ಮಿಕ ವಿವಾಹಿತ ಬಾಬು (೫೦) ಅನಾರೋಗ್ಯದಿಂದ ತಾ. ೨೪ ರಂದು ಮೃತಪಟ್ಟಿದ್ದರು.
ಶೆಟ್ಟಿಗನಹಳ್ಳಿಯ ಗ್ರಾಮಸ್ಥರಿಗೆ ತಮ್ಮ ಗ್ರಾಮದಲ್ಲಿ ಸ್ಮಶಾನವಿಲ್ಲದ್ದರಿಂದ ಮೃತನ ಶವಸಂಸ್ಕಾರ ಮಾಡಲು ಪಕ್ಕದ ಅಪ್ಪಶೆಟ್ಟಳ್ಳಿ ಗ್ರಾಮದ ಸಾಮಾಜಿಕ ಅರಣ್ಯದಲ್ಲಿ ಮಾಡಲು ಹೋದಾಗ ಅಪ್ಪಶೆಟ್ಟಳ್ಳಿ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಶೆಟ್ಟಿಗನಹಳ್ಳಿಯ ಗ್ರಾಮಸ್ಥರು ರೊಚ್ಚಿಗೆದ್ದು ಒಟ್ಟು ಸೇರಿ ಶೆಟ್ಟಿಗನಹಳ್ಳಿ ಗ್ರಾಮದ ಮುಖ್ಯ ರಸ್ತೆಯ ಪಕ್ಕದ ಎಮ್ಮೆಗುಂಡಿ ಪೈಸಾರಿ ಜಾಗದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಮೃತದೇಹವನ್ನು ಮೆರವಣಿಗೆಯ ಮೂಲಕ ಪಟಾಕಿ ಸಿಡಿಸುತ್ತಾ ತಂದು ಶವಸಂಸ್ಕಾರ ಮಾಡಿದರು. ಶೆಟ್ಟಿಗನಹಳ್ಳಿಯಲ್ಲಿ ಸುಮಾರು ೬೪ ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮಸ್ಥರು ಒಗ್ಗಟ್ಟನ್ನು ಪ್ರದರ್ಶಿಸಿದರು.
ಶವಸಂಸ್ಕಾರದಲ್ಲಿ ಊರಿನ ಪ್ರಮುಖರಾದ ಚಂದ್ರೇಗೌಡ, ದಿನೇಶ್, ಜಗದೀಶ್, ಲೋಕೇಶ್, ರವಿ, ಡಿ.ಪಿ ಬೋಜಪ್ಪ, ಹೊನ್ನರಾಜ್ ಮಹಿಳೆ ಯರು ಹಾಗೂ ಇತರರು ಭಾಗಿಯಾಗಿದ್ದು ಸ್ಥಳದಲ್ಲಿ ಸಹಾಯಕ ಠಾಣಾಧಿಕಾರಿ ಹೆಚ್ ಎಂ ಗೋವಿಂದ್, ಕಂದಾಯ ಪರಿವೀಕ್ಷಕ ಮಂಜುನಾಥ ಇದ್ದರು. ಶೆಟ್ಟಿಗನಹಳ್ಳಿಯ ಗ್ರಾಮಸ್ಥರು ಮಸಣಕ್ಕಾಗಿ ಜಾಗಕ್ಕೆ ಜಿಲ್ಲಾಧಿಕಾರಿ ಗಳಿಗೆ ಕಂದಾಯ ಪರಿವೀಕ್ಷಕರ ಮೂಲಕ ಮನವಿ ಅರ್ಪಿಸಿದರು