ಹೊದ್ದೂರು, ಡಿ. 24: ಮಡಿಕೇರಿ ತಾಲೂಕು ಸೇರಿದಂತೆ, ಜಿಲ್ಲೆಯ ಬಹುತೇಕ ಕಡೆ ಗ್ರಾಮೀಣ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯ ವಾಗಿಲ್ಲ. ಬಹುತೇಕ ಕಡೆಗಳಲ್ಲಿ ರಸ್ತೆಗೆ ಸಂಬಂಧಿತ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಆದರೂ, ಆ ರಸ್ತೆಗಳು ವಾಹನ ಸಂಚಾರಕ್ಕೆ ಅಯೋಗ್ಯವಾಗುತ್ತಿವೆ ಎಂದರೆ ಏನರ್ಥ? ಈ ಬಗ್ಗೆ ವಾಹನ ಸವಾರರು, ವಾಹನ ಚಾಲಕ ಸಂಘದವರು, ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ವಾಹನ ಮಾಲೀಕÀರು ತಮ್ಮ ವಾಹನಗಳನ್ನು ಪದೇ ಪದೇ ದುರಸ್ತಿ ಮಾಡಿಸಿ ಸುಸ್ತಾಗಿದ್ದಾರೆ. ಎಲ್ಲರೂ ಆಡಳಿತ ವ್ಯವಸ್ಥೆಯನ್ನು ದೂರುವವರೇ...

“ಅಭಿವೃದ್ಧಿ ಮಂತ್ರ” ಪಠಣ !

ಹಲವರಂತೂ ಆಡಳಿತ ವ್ಯವಸ್ಥೆಯ ವಿರುದ್ಧ ರೋಸಿದ್ದಾರೆ. ಇಂದೂ “ನಮ್ಮಲ್ಲಿ ಬ್ರಿಟಿಷ್ ಆಡಳಿತವೇ ಇರಬಾರದಿತ್ತೇ” ಅಂದುಕೊಳ್ಳುತಿದ್ದಾರೆ. ಇಂತಹ ಸಮಸ್ಯೆಗಳ ಸಂಕೋಲೆಯ ಕುರಿತಾಗಿ, ಜಿಲ್ಲೆಯ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿವೆ. ಟಿವಿ ವಾಹಿನಿಗಳಲ್ಲಿ ಸಚಿತ್ರ ವರದಿಗಳು ಪದೇ ಪದೇ ಬಿತ್ತರವಾಗುತ್ತವೆ. ಆದರೂ, ನಮ್ಮ ಆಡಳಿತ ವ್ಯವಸ್ಥೆಗೆ ಇವೆಲ್ಲಾ “ಕೋಣನ ಮುಂದೆ ಕಿನ್ನರಿ ಬಾರಿಸಿ”ದಂತಾಗುತ್ತದೆ.

ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಸವಾರರು, ಅದರಲ್ಲಿರುವ ಪಯಣಿಗರು ಸಂಬಂಧಿತ ಜನಪ್ರತಿನಿಧಿಗಳಿಗೆ, ಇಲಾಖಾಧಿಕಾರಿಗಳಿಗೆ, ಗುತ್ತಿಗೆದಾರರಿಗೆ ದಿನವೂ ಹಿಡಿಶಾಪ ಹಾಕುತ್ತಲೇ ಇರುತ್ತಾರೆ. ಪ್ರತಿದಿನವೂ “ಅಭಿವೃದ್ಧಿ ಮಂತ್ರ” ಪಠಿಸುವ ಆಡಳಿತ ಪಕ್ಷಗಳು, ವಿರೋಧ ಪಕ್ಷಗಳಿಗೂ ಈ ಶಾಪಗಳಲ್ಲಿ ಪಾಲಿದೆ. ಬಾಯಲ್ಲಿ ಅಭಿವೃದ್ಧಿ ಮಂತ್ರಪಠಿಸುವ ನಮ್ಮ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಅದನ್ನು ಯಥಾರೀತಿ ಕಾರ್ಯರೂಪಕ್ಕೆ ತರುವಲ್ಲಿ ಎಡುವುತ್ತಿದ್ದಾರೆ. ಗುತ್ತಿಗೆದಾರರು ಮಾತ್ರ ಇಲ್ಲಿಯ ಹವಮಾನವನ್ನೇ ದೂರುತ್ತಾರೆ ಎಂಬ ಆಕ್ಷೇಪಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.

ದುರಸ್ತಿ ಕಾರ್ಯವೇ ಇಲ್ಲ !

ಪ್ರತಿ ವರ್ಷವೂ ಅಕ್ಟೋಬರ್ ಮಾಸದ ಕಾವೇರಿ ಸಂಕ್ರಮಣ ಹಬ್ಬದ ತರುವಾಯ ಜಿಲ್ಲೆಯ ರಸ್ತೆಗಳ ದುರಸ್ತಿಗೆ ಜಿಲ್ಲಾಡಳಿತ ಮುುಂದಾಗಬೇಕು. ಕೆಲವೊಮ್ಮೆ ಮಳೆ ಆ ತಿಂಗಳಲ್ಲಿ ಮುಂದುವರಿದಲ್ಲಿ ಮುಂದಿನ ಅಂದರೆ, ನವೆಂಬರ್ ಮಾಸದಲ್ಲಿ ಈ ಪ್ರಕ್ರಿಯೆಗೆ ಸಂಬಂಧಿತರಿಂದ ಚಾಲನೆ ದೊರೆಯುತ್ತಿತ್ತು. ಪ್ರಪ್ರಥಮವೆಂಬಂತೆ ಮಡಿಕೇರಿ-ಭಾಗಮಂಡಲ ರಸ್ತೆಗೆ “ನಾಮಕಾವಸ್ಥೆ ತೇಪೆ” ಹಾಕಲಾಗುತ್ತದೆ. ಬಳಿಕ ಕೆಲವೆಡೆ ರಸ್ತೆಯ ದುರಸ್ತಿ ಕಾರ್ಯಕ್ಕೆ ಚಾಲನೆ ದೊರೆಯುತ್ತಿತ್ತು.

ಆದರೆ, ಕಳೆದ ಕೆಲ ವರ್ಷಗಳಲ್ಲಿ ಈ ಪ್ರಕ್ರಿಯೆಯು ಆಮೆವೇಗದಲ್ಲಿ ಸಾಗಿದೆ-ಸಾಗುತ್ತಿದೆ. ನಮ್ಮ ಆಡಳಿತ ವ್ಯವಸ್ಥೆಯು ಅದೇಕೋ ಜಿಡ್ಡುಗಟ್ಟಿದಂತೆ ಆಗಿದೆ. ಪ್ರತಿ ಅಕ್ಟೋಬರ್-ನವೆಂಬರ್ ಮಾಸದಲ್ಲಿ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ವತಿಯಿಂದ ಈ ಬಗ್ಗೆ ಮಾಧ್ಯಮ ಗೋಷ್ಠಿಯಲ್ಲಿ ಒತ್ತಾಯ ಹೇರಲಾಗುತ್ತಿತ್ತು. ಆದರೆ, ಈ ಬಾರಿ ಎಲ್ಲಾ ಅಭಿವೃದ್ಧಿಪರ ಕಾರ್ಯಗಳಿಗೂ “ಕೊರೊನಾ” ದತ್ತ ಬೊಟ್ಟು ಮಾಡಿ ತೋರಿಸಲಾಗುತ್ತಿದೆ.

ಇದು ಜನತೆಗೆ ಅಧಿಕಾರಿ ವರ್ಗ-ಜನಪ್ರತಿನಿಧಿಗಳು ಮಾಡುವ ದ್ರೋಹ ಎಂದು ನೇರವಾಗಿ ದೂರುವ ವರ್ಗವು ಸೃಷ್ಟಿಯಾಗಿದೆ. ಇಂತಹ ರಸ್ತೆಗಳಿಂದ ಪ್ರತೀ ದಿನವೂ ಒಂದಲ್ಲ ಒಂದು ಕಡೆ ವಾಹನ ಅಪಘಾತಗಳು ನಡೆಯುತ್ತಲೆ ಇರುತ್ತವೆ. ಇಂತಹ ವಾಹನಗಳಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಿದೆ. ಪ್ರತೀ ವಾರವೂ ವಾಹನಗಳು ಗ್ಯಾರೇಜ್‍ಗೆ ಸೇರಲೇಬೇಕು ಎಂಬಂತಾಗಿದೆ ಸದ್ಯದ ಸ್ಥಿತಿ.

ಚುನಾವಣೆ ಬಂದಾಗ ಎಚ್ಚರ !

ನಮ್ಮ ಜಿಲ್ಲೆಯ ಬಹುತೇಕ ರಸ್ತೆಗಳು ಚುನಾವಣೆ ಬಂದಾಗ ಮಾತ್ರ ಒಂದಿಷ್ಟು ಮೆರಗು ಬರುತ್ತದೆ. ಮುಖ್ಯಮಂತ್ರಿಗಳು ಅಥವಾ ಇನ್ಯಾರೋ ಬರುವರು ಎಂದಾಗ ಆಡಳಿತ ವ್ಯವಸ್ಥೆಯು ನಿದ್ದೆಯಿಂದ ಮೈಕೊಡವಿ ಎದ್ದಂತೆ. ಕೆಲವು ಕಡೆಗಳಲ್ಲಿ ಮಾತ್ರ ರಸ್ತೆಗಳಿಗೆ “ಪೌಡರ್“ ಲೇಪನ ಕಾರ್ಯ ನಡೆಯುತ್ತದೆ. ಮಂತ್ರಿಮಹೋದಯರು ಅತ್ತ ಕಡೆ ಹೋದೊಡನೆ ಮತ್ತೆ ರಸ್ತೆ ಮರಳಿ ಯಥಾಸ್ಥಿತಿಗೆ ಮರಳುತ್ತದೆ.

ರಸ್ತೆಯ ಅಂಚಿನ ವಿಸ್ತರಣೆ ?

ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆದಾರರು ರಸ್ತೆ ವಿಸ್ತರಣೆಗೆ ಆದ್ಯತೆ ನೀಡುತ್ತಾರೆ. ಆದರೆ, ಇರುವ ರಸ್ತೆಯ ಗುಣಮಟ್ಟವನ್ನು ಏರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ ಎಂಬುದು ಹಲವಾರು ವಾಹನ ಸವಾರರ ನೇರ ಆರೋಪ-ಆಕ್ಷೇಪ.

ಉದಾಹರಣೆಗಾಗಿ ಮಡಿಕೇರಿ-ವೀರಾಜಪೇಟೆ ರಸ್ತೆಯನ್ನೇ ನೋಡಿ. ಹಲವಾರು ಬಾರಿ ರಸ್ತೆಯನ್ನು ಮೋಜಣಿ (ಸರ್ವೆ) ಮಾಡಿಸಲಾಯಿತು. ರಸ್ತೆಯ ಬದಿಯಲ್ಲಿದ್ದ ಹೆಮ್ಮರಗಳನ್ನು ಕಡಿದುರುಳಿಸಲಾಯಿತು. ಕೆಲವು ಯಾರದೋ ಮನೆ ಸೇರಿದವು. ಉಳಿದವು ಅರಣ್ಯ ಇಲಾಖೆಯ ಪಾಲಾಯಿತು. ರಸ್ತೆಯ ಅಂಚನ್ನು ಮಾತ್ರ ವಿಸ್ತರಿಸಲಾಯಿತು. ರಸ್ತೆಯ ಗುಣಮಟ್ಟವೇನು ಏರಲಿಲ್ಲ !

ಆದರೆ, ಡಾಂಬರು ರಸ್ತೆಯನ್ನು ಇನ್ನೂ ವಿಸ್ತರಣೆ ಮಾಡಲೇ ಇಲ್ಲ. ಇರುವ ರಸ್ತೆಯಲ್ಲಿ ಪ್ರತೀ ಅಡಿಗೂ ಗುಂಡಿಗಳು. ಇದು ರಾಜ್ಯ ಹೆದ್ದಾರಿ ! ಎಂತಹಾ ನಾಚಿಕೆಗೇಡು !

ಚರಂಡಿ-ಚರಂಡಿ ?

ಈ ರಸ್ತೆಯಲ್ಲಿನ ಚರಂಡಿಗಳನ್ನು ಹಲವಾರು ಬಾರಿ ತೆಗೆಸಲಾಯಿತು. ಕಾಂಕ್ರಿಟ್ ಚರಂಡಿ ! ಮತ್ತೆ ಅಲ್ಲಿಗೆ ಮಣ್ಣು ತುಂಬಿಸಲಾಗಿದೆ. ಮತ್ತೆ ಚರಂಡಿ ಮಾಡಲೇ ಬೇಕಲ್ಲ. ಒಂದೇ ರಸ್ತೆಗೆ ಎಷ್ಟು ಬಾರಿ ಚರಂಡಿ ತೆಗೆಸಲಾಗುತ್ತಿದೆ? ಮಡಿಕೇರಿಯಿಂದ ಮೇಕೇರಿವರೆಗಿನ ರಸ್ತೆಯಲ್ಲಿ ಇಂತಹ ಕಾಮಗಾರಿಗಳು ಅದೆಷ್ಟು ಬಾರಿ ನಡೆಯುತ್ತಿವೆ. ನೋಡಿ. ಇದೆಂಥಹಾ ಅಭಿವೃದ್ಧಿ?

ಮೂರ್ನಾಡು - ನಾಪೋಕ್ಲು ರಸ್ತೆ

ಹೋಬಳಿ ಕೇಂದ್ರವಾದ ಮೂರ್ನಾಡು ವ್ಯಾಪ್ತಿಯಲ್ಲಿ ರಸ್ತೆಗಳ ಪಾಡು ಹೇಳತೀರದು. ಮೂರ್ನಾಡುವಿನಿಂದ ನಾಪೋಕ್ಲಿಗೆ ತೆರಳುವ ರಸ್ತೆಯು ಹದಗೆಟ್ಟಿದೆ. ಮೂರ್ನಾಡು ಕಿರಿಯ ಕಾಲೇಜು ಬಳಿಯಿಂದ ಸುಮಾರು ಒಂದು ಕಿಲೋ ಮೀಟರ್‍ವರೆಗಿನ ರಸ್ತೆಯಲ್ಲಿ ವಾಹನಗಳು ಸಂಚರಿಸುವುದು ಅಸಾಧ್ಯವಾಗಿದೆ. ಈ ರಸ್ತೆಯಲ್ಲಿ ಪ್ರತೀ ದಿನವೂ ನೂರಾರು ವಾಹನಗಳು ಸಂಚರಿಸುತ್ತವೆ.

ಇದರ ಮುಖಾಂತರವೇ ಪಾಡಿ ಇಗ್ಗುತಪ್ಪ ದೇಗುಲ, ತಲಕಾವೇರಿ, ಎಮ್ಮೆಮಾಡು ಮುಂತಾದ ಕ್ಷೇತ್ರಗಳಿಗೆ ಯಾತ್ರಾರ್ಥಿಗಳು ಸಾಗುತ್ತಾರೆ. ಅವರೆಲ್ಲಾ ಈ ರಸ್ತೆಯ ದುಸ್ಥಿತಿಯನ್ನು ಕಂಡು ಮಮ್ಮಲ ಮರುಗುತ್ತಾರೆ. ಈ ರಸ್ತೆಯ ಅಂಚಿನಲ್ಲಿರುವ ಮಣ್ಣನ್ನು ಪ್ರತೀ ವರ್ಷವೂ ತೆಗೆಯಲಾಗುತ್ತದೆ! ಆದರೆ, ರಸ್ತೆಗೆ ಮರು ಡಾಂಬರೀಕರಣ ಮಾತ್ರ ಕನಸಿನ ಮಾತಾಗಿದೆ. ಕೆಲವೆಡೆಗಳಲ್ಲಿ ಮಾತ್ರ ತೇಪೆ ಹಾಕಲಾಗುತ್ತಿದೆ. ಆದರೂ, ಹಲವಾರು ಗುಂಡಿಗಳು ಹಾಗೇ ಉಳಿದಿವೆ !

ಹೊದ್ದೂರು-ಮೂರ್ನಾಡು ಸಂಪರ್ಕ

ಹೊದ್ದೂರಿನಿಂದ ಮೂರ್ನಾಡು ಕೊಡವ ಸಮಾಜಕ್ಕಾಗಿ ಸಾಗುವ ಪ್ರಮುಖ ಸಂಪರ್ಕ ರಸ್ತೆಯ ಪಾಡಂತೂ ವರ್ಣಿಸಲಸದಳ. ಬಡುವಂಡ ಮನೆಯ ಕೆಳಭಾಗದ ಹೆಗ್ಗೊಲ್ಲಿ- ಕೊರಡಿಯ ಕಡೆ ತೆರಳುವ ರಸ್ತೆಯಂತೂ ಚರಂಡಿಯಂತಾಗಿದೆ. ಚುನಾವಣೆಯ ಸಮಯದಲ್ಲಿ ಎಲ್ಲಾ ಪಕ್ಷಗಳ ಪ್ರಮುಖರಿಂದ ಮರಿ ಪುಡಾರಿಗಳವರೆಗೆ ಎಲ್ಲರೂ ಪುಂಖಾನುಪುಂಖವಾಗಿ “ಅಭಿವೃದ್ಧಿ” ಮಂತ್ರ ಪಠಿಸುವವರೇ. ಆದರೆ, ಇಂತಹ ರಸ್ತೆಗಳ ಬಗ್ಗೆ ಅದೇಕೋ ಇವರಿಗೆಲ್ಲಾ ಅಸಡ್ಡೆ.

ಅವಶ್ಯವಿಲ್ಲದ ಕಡೆ ಕಾಂಕ್ರೀಟ್ !

ಹೊದ್ದೂರಿನ ಶ್ರೀಸಾರ್ತಾವೇಶ್ವರ ಸನ್ನಿಧಿಯ ಮುಂಭಾಗದ ಆಟದ ಮೈದಾನದ ಬಳಿ ಚೆನ್ನಾಗಿದ್ದ ರಸ್ತೆಯನ್ನು ಅಗೆದು ಕಾಂಕ್ರಿಟ್ ಹಾಕಲಾಗಿದೆ. ಆದರೆ, ಕಾಂಕ್ರಿಟ್ ಬೇಕಾಗಿರುವುದು ಚೆಟ್ಟಿಮಾಡ ಮಲ್ಲು ಮತ್ತು ಬಡುವಂಡ ಕುಟುಂಬದ ತೋಟದ ಮುಂದೆ ಇರುವ ಹೆಗ್ಗೊಲ್ಲಿ ಬೆಟ್ಟದ ಇಳಿಜಾರು ರಸ್ತೆಗೆ ! ಆದರೆ, ಅಧಿಕಾರಿಗಳು ಗುತ್ತಿಗೆದಾರರು ಕಾಂಕ್ರಿಟ್ ಹಾಕಲು ಹೊರಟಿರುವುದು ಸಮತಟ್ಟಾದ ಕಡೆ ! ಎಂತಹಾ ವಿಪರ್ಯಾಸ ನೋಡಿ. ಇಲ್ಲಿ ರಸ್ತೆಗೆ ಚರಂಡಿ ಇಲ್ಲದೆ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಪ್ರವಾಹದ ರೀತಿ ಹರಿಯುತ್ತದೆ. ಅಧಿಕಾರಿಗಳು ಅನಾವಶ್ಯಕವಾಗಿ ಸರಕಾರಿ ಹಣವನ್ನು ಅಗತ್ಯವಿಲ್ಲದ ಕಡೆ ಪೋಲು ಮಾಡುತ್ತಿದ್ದಾರೆ ಎಂದು ಈ ಭಾಗದ ಗ್ರಾಮಸ್ಥರು ದೂರಿದ್ದಾರೆ.

ಜನತೆಯ ಅಭಿಪ್ರಾಯಗಳು

ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಜನಪ್ರತಿನಿಧಿಗಳು ಮಾಡಿ ತೋರಬೇಕು. ಸಕಾಲಿಕವಾಗಿ ಗುಣಮಟ್ಟದ ಕೆಲಸ ಮಾಡಿಸಲು ವಿಫಲವಾದ ಅಧಿಕಾರಿ ವರ್ಗದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಳೆಗಾಲದಲ್ಲಿಯೇ ಮುಂಬರುವ ದಿನಗಳಲ್ಲಿ ಡಾಂಬರೀಕರಣ ಕುರಿತಂತೆ ಪೂರ್ವಭಾವಿ ಸಭೆ ನಡೆಸಬೇಕು. ಅಕ್ಟೋಬರ್-ನವೆಂಬರ್ ಮಾಸಗಳಲ್ಲಿ ಈ ಕಾರ್ಯ ನಡೆಯಬೇಕು. ಗುಣಮಟ್ಟದ ಕಾಮಗಾರಿಗಳ ಬಗ್ಗೆ ಸ್ಥಳೀಯರು ಗುತ್ತಿಗೆದಾರರನ್ನು ಆಗ್ರಹಿಸಬೇಕು.

ರಸ್ತೆಯ ಸಮಸ್ಯೆಗಳ ಬಗ್ಗೆ ಚಾಲಕರ ಸಭೆ ಕರೆಯಲಾಗಿತ್ತು. ಸಭೆಯ ಒಮ್ಮತದ ನಿರ್ಧಾರದಂತೆ, ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕರನ್ನು ನಿಯೋಗ ಭೇಟಿ ಮಾಡಲಿದೆ. ಅವರಿಗೆ ಸಮಸ್ಯೆಗಳ ಕುರಿತಂತೆ ವಿವರವಾದ ಮಾಹಿತಿ ನೀಡಲಿದೆ. ಸಕಾಲಿಕವಾಗಿ ಸಮಸ್ಯೆ ಬಗೆಹರಿಯದಿದ್ದಲ್ಲಿ ಸಂಘ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಿದೆ.

- ಅರುಣ್ ಕುಮಾರ್ ತ್ರಿನೇತ್ರ ವಾಹನ ಮಾಲೀಕರ ಸಂಘ, ಮೂರ್ನಾಡು.

ಮೂರ್ನಾಡು ಪಟ್ಟಣದ ಸುತ್ತಮುತ್ತಲ ಗ್ರಾಮಗಳಿಗೆ ತೆರಳುವ ರಸ್ತೆಗಳು ಹದಗೆಟ್ಟಿವೆ. ವಾಹನಗಳಿಂದಲೇ ದುಡಿದು ಬದುಕುವವರು ತಮ್ಮ ಸಂಪಾದನೆ ಶೇ. 75 ಭಾಗವನ್ನು ವಾಹನಗಳ ದುರಸ್ತಿಗೆ ವೆಚ್ಚ ಮಾಡಬೇಕಿದೆ. ಸಂಬಂಧಿತರು ಹದಗೆಟ್ಟ ರಸ್ತೆಗಳ ಮರು ಡಾಂಬರೀಕರಣ ಮಾಡಬೇಕು. ನಾಮಕಾವಸ್ಥೆಗೆ ರಸ್ತೆಯ ಗುಂಡಿಗಳನ್ನು ಮುಚ್ಚುವುದು ಸರಿಯಲ್ಲ. ಗುಂಡಿ ಮುಚ್ಚಿದ ಕಡೆ ಹಲವಾರು ಗುಂಡಿಗಳು ಅದೇ ರೀತಿ ಉಳಿದಿವೆ ! ರಸ್ತೆಗಳ ಗುಣಮಟ್ಟವನ್ನು ಏರಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು.

- ಅಬು, ಫ್ರೆಂಡ್ಸ್ ವಾಹನ ಚಾಲಕರ ಸಂಘ, ಮೂರ್ನಾಡು.

ಕಳಪೆ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಿ ಸಾಕಾಗಿದೆ. ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಈ ಹಿನ್ನೆಲೆ ಸಂಬಂಧಿತರು ಕಾಲ ಕಾಲಕ್ಕೆ ರಸ್ತೆಯನ್ನು ದುರಸ್ತಿಪಡಿಸಬೇಕು. ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು. ಜನತೆಯ ಹಣ ವೃಥಾ ಪೋಲಾಗುವುದನ್ನು ತಪ್ಪಿಸುವುದು ಆಡಳಿತ ವರ್ಗದವರ ಜವಾಬ್ದಾರಿ. ಅಧಿಕಾರಿ ವರ್ಗದವರಿಗೆ ಕಾಲಕಾಲಕ್ಕೆ ಕಾಮಗಾರಿ ಕೈಗೊಳ್ಳುವುದಕ್ಕೆ ಜನಪ್ರತಿನಿಧಿಗಳು ಮಳೆಗಾಲ ಮುಗಿದ ಕೂಡಲೇ ಆದೇಶಿಸಬೇಕು.

- ಮಾಳೇಟಿರ ನವೀನ್ ಕಾರ್ಯಪ್ಪ, ಬೆಳೆಗಾರರು, ಮೂರ್ನಾಡು.

ಬಡುವಂಡ ಮನೆಯ ಕೆಳಭಾಗದ ಇಳಿಜಾರಿಗೆ ಕಾಂಕ್ರಿಟ್ ರಸ್ತೆ ಮಾಡಬೇಕು. ಇದರಿಂದ ಮೂರ್ನಾಡು, ಹೊದ್ದೂರು, ನಾಪೋಕ್ಲು, ಪಾಲೂರು, ಭಾಗಮಂಡಲ ಕಡೆ ವಾಹನ ಸಂಚಾರಕ್ಕೆ ಸುಲಭವಾಗಲಿದೆ. ಕೂಡಲೇ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಕಾರ್ಯ ತತ್ಪರರಾಗಬೇಕು. ಪ್ರತೀ ವರ್ಷವೂ ಮಳೆಗಾಲ ಮುಗಿದ ಕೂಡಲೇ ಅಗತ್ಯವಿರುವ ಕಡೆ ಡಾಂಬರೀಕರಣ ಮಾಡಲು ಜನಪ್ರತಿನಿಧಿಗಳು ಆಧಿಕಾರಿ ವರ್ಗಕ್ಕೆ ಆದೇಶ ನೀಡಬೇಕು.

- ಚೆಟ್ಟಿಮಾಡ ಪ್ರಶಾಂತ್, ಬೆಳೆಗಾರರು, ಕೊರಡಿ, ಹೊದ್ದೂರು.

ಸ್ವಾತಂತ್ರ್ಯ ಬಂದು 8 ದಶಕ ಸಮೀಪಿಸುತ್ತಿದ್ದರೂ, ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ ಆಡಳಿತ ವ್ಯವಸ್ಥೆಯ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ಅಧಿಕಾರಿಗಳು-ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಅಸಮರ್ಪಕ ರಸ್ತೆಗೆ ಮೂಲ ಕಾರಣ, ಕೂಡಲೇ ಮೂರ್ನಾಡು ವ್ಯಾಪ್ತಿಯ ರಸ್ತೆಗಳ ಮರುಡಾಂಬರೀಕರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಡಾಂಬರು ತೇಪೆ ಹಚ್ಚುವುದರಿಂದ ಪ್ರಯೋಜನವಿಲ್ಲ ಎಂದು ಮೂರ್ನಾಡು ಗೌಡ ಸಮಾಜದ ಕಾರ್ಯದರ್ಶಿ ಮೇರ್‍ಕಜೆ ಲೋಹಿತ್ ಸೋಮಯ್ಯ ತಿಳಿಸಿದ್ದಾರೆ. - ಕೂಡಂಡ ರವಿ