ರೈತರೊಂದಿಗೆ ಮಾತುಕತೆಗೆ ಸಿದ್ಧವಾದ ಸರ್ಕಾರ
ಚಂಡೀಗಢ, ಡಿ. 24: ಮಾತುಕತೆಗೆ ಸೂಕ್ತ ಪ್ರಸ್ತಾವನೆ ಕಳುಹಿಸುವಂತೆ ರೈತ ಸಂಘಗಳು ಕೇಳಿದ ಮಾರನೇ ದಿನವೇ ಕೇಂದ್ರ ಸರ್ಕಾರ ತಾನು, ಎಲ್ಲಾ ಸಮಸ್ಯೆಗಳ ಕುರಿತು ಮುಕ್ತ ಮಾತುಕತೆಗೆ ಸಿದ್ಧವಿದ್ದು, ಅದಕ್ಕೆ ನೀವೇ ದಿನಾಂಕ ಮತ್ತು ಸಮಯ ನಿಗದಿಪಡಿಸುವಂತೆ ಗುರುವಾರ ಚೆಂಡನ್ನು ರೈತರ ಅಂಗಳಕ್ಕೆ ಎಸೆದಿದೆ. ಈ ಸಂಬಂಧ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರು 40 ರೈತ ಸಂಘಟನೆಗಳಿಗೆ ಪತ್ರ ಬರೆದಿದ್ದು, ನೀವು ಚರ್ಚಿಸಲು ಬಯಸುವ ಸಮಸ್ಯೆಗಳ ಬಗ್ಗೆ ವಿವರ ನೀಡುವಂತೆ ಕೇಳಿಕೊಂಡಿದ್ದಾರೆ. ಸರ್ಕಾರ ಸ್ಪಷ್ಟ ಉದ್ದೇಶ ಮತ್ತು ಮುಕ್ತ ಮನಸ್ಸಿನಿಂದ ಪ್ರತಿಭಟನೆಯನ್ನು ಅಂತ್ಯಗೊಳಿಸಲು ನಿಮ್ಮೊಂದಿಗೆ ಮತ್ತೆ ಮಾತುಕತೆ ನಡೆಸಲು ಸಿದ್ಧವಿದೆ. ಮಾತುಕತೆಯ ದಿನಾಂಕ ಮತ್ತು ಸಮಯವನ್ನು ತಿಳಿಸುವಂತೆ ಅಗರ್ವಾಲ್ ಅವರು ರೈತ ಮುಖಂಡರಿಗೆ ಮನವಿ ಮಾಡಿದ್ದಾರೆ. ಸರ್ಕಾರ ಪ್ರತಿಭಟನಾನಿರತ ರೈತ ಸಂಘಟನೆಗಳು ಎತ್ತಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರಪತಿಗಳನ್ನು ಭೇಟಿಯಾದ ರಾಹುಲ್
ನವದೆಹಲಿ, ಡಿ. 24: ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ ಮತ್ತು ಅದು ಕಲ್ಪನೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಹಾಗೂ ಸಂಸತ್ ಜಂಟಿ ಅಧಿವೇಶನ ಕರೆಯುವಂತೆ ಮನವಿ ಸಲ್ಲಿಸಿದರು. ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಈ ಕಾನೂನುಗಳನ್ನು ರದ್ದು ಮಾಡದಿದ್ದರೆ ದೇಶಕ್ಕೆ ತೊಂದರೆಯಾಗುತ್ತದೆ ಎಂದರು. ಹೊಸ ಕೃಷಿ ಕಾನೂನುಗಳು ರೈತ ವಿರೋಧಿಯಾಗಿವೆ ಎಂದು ನಾವು ರಾಷ್ಟ್ರಪತಿಗಳಿಗೆ ತಿಳಿಸಿದ್ದೇವೆ. ಇದರಿಂದ ರೈತರು ಮತ್ತು ಕಾರ್ಮಿಕರು ತೊಂದರೆ ಅನುಭವಿಸುತ್ತಾರೆ. ಈ ಕಾನೂನುಗಳು ರೈತರ ಪರವಾಗಿದೆ ಎಂದು ಸರ್ಕಾರ ಹೇಳಿದೆ, ಆದರೆ ಇಡೀ ದೇಶದ ರೈತರು ಈ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಿಎಸ್ವೈ ರಾಜೀನಾಮೆಗೆ ಸಿದ್ದು ಒತ್ತಾಯ
ಬೆಂಗಳೂರು, ಡಿ. 24: ಡಿ ನೋಟಿಫಿಕೇಶನ್ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆ ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಕೋರ್ಟ್ ನಿಗಾದಲ್ಲಿ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವುದರಿಂದ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ನಿಷ್ಪಕ್ಷಪಾತ ತನಿಖೆ ಆಗಲು ಸಾಧ್ಯವಿಲ್ಲ. ಈ ಹಿನ್ನೆಲೆ ಸಿಎಂ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆರೋಪದಿಂದ ಮುಕ್ತರಾಗಿ ಬಂದ್ರೆ ಮತ್ತೆ ಅಧಿಕಾರ ವಹಿಸಿಕೊಳ್ಳಲು ನಮ್ಮ ತಕರಾರಿಲ್ಲ ಎಂದರು. ಯಡಿಯೂರಪ್ಪ ಅವರಿಗೆ ಕಾನೂನಿನ ಬಗ್ಗೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಒಂದು ಸೆಕೆಂಡ್ ಕೂಡ ಸಿಎಂ ಆಗಿ ಇರಬಾರದು. ಬಂಡತನದಿಂದ ರಾಜೀನಾಮೆ ನೀಡದಿದ್ದರೆ ಅವರ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು. ಚೌಕೀದಾರ್ ಮೋದಿ ಯಡಿಯೂರಪ್ಪ ಮೇಲೆ ಕ್ರಮ ಜರುಗಿಸಬೇಕು. ಇದು ಸೀರಿಯಸ್ ಕೇಸ್, ಕೂಡಲೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
ಕಾಸರವಳ್ಳಿ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ
ಬೆಂಗಳೂರು, ಡಿ. 24: ಕನ್ನಡದದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಎಸ್.ವಿ. ಕುಮಾರ್ ಸಂಗಮ ಫಿಲಂಸ್ ಬ್ಯಾನರ್ನಲ್ಲಿ ತಯಾರಾದ "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ" ಚಿತ್ರವು ರೋಮ್ನಲ್ಲಿ ನಡೆದ ಏಷ್ಯಾಟಿಕ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ. ಚಿತ್ರವು ಜಯಂತ್ ಕಾಯ್ಕಿಣಿಯವರ "ಹಾಲಿನ ಮೀಸೆ" ಕಥೆಯನ್ನಾಧರಿಸಿದ ಈ ಚಿತ್ರದಲ್ಲಿ ಧ್ರುಶಾ ಕೊಡಗು, ಆರಾಧ್ಯಾ, ಪ್ರವರ್ತ ರಾಜು, ಮಾಲತೇಶ್ ಮತ್ತಿತರರು ಇದ್ದಾರೆ.
ಬಂದೂಕುಧಾರಿಗಳಿಂದ 100 ಮಂದಿಯ ಹತ್ಯೆ
ಅಡಿಸ್ ಅಬಾಬಾ, ಡಿ. 24: ಇಥಿಯೋಪಿಯಾದ ಪಶ್ಚಿಮ ಬೆನಿಶಾಂಗುಲ್-ಗುಮುಜ್ ಪ್ರಾದೇಶಿಕ ರಾಜ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಮನ ಬಂದಂತೆ ಗುಂಡಿನ ದಾಳಿ ನಡೆಸಿ 100ಕ್ಕೂ ಹೆಚ್ಚು ನಾಗರಿಕರನ್ನು ಭೀಕರವಾಗಿ ಕೊಂದಿದ್ದಾರೆ. ಬೆಕುಜಿ ಕೆಬೆಲ್ಲೆ, ಬುಲೆನ್ ವೆರೆಡಾ ಮತ್ತು ಮೆಟೆಕೆಲ್ ವಲಯದಲ್ಲಿ ಸಂಭವಿಸಿದೆ. ದಾಳಿಕೋರರು ನಿದ್ರೆಯಲ್ಲಿದ್ದ ನಿವಾಸಿಗಳ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಜನರನ್ನು ಕೊಂದು ಅವರ ಮನೆಗಳನ್ನು ಸಹ ಸುಟ್ಟು ಹಾಕಲಾಗಿದೆ ಎಂದು ನ್ಯಾಷನಲ್ ಆಡಿಸ್ ಸ್ಟ್ಯಾಂಡರ್ಡ್ ಸುದ್ದಿ ನಿಯತಕಾಲಿಕವು ಪ್ರತ್ಯಕ್ಷದರ್ಶಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ. ಭದ್ರತಾ ಪಡೆಗಳ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗಿದೆ.