ಮಡಿಕೇರಿ, ಡಿ. 24: ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಗುಡ್ಡೆಹೊಸೂರು ಐಚೆಟ್ಟಿರ ನರೇನ್ ಸೋಮಯ್ಯ ಸ್ಪೋಟ್ಸ್ ಸೆಂಟರ್ ಮೈದಾನದಲ್ಲಿ ಆಯೋಜಿಸಿದ ಟೆನ್ನಿಸ್ ಬಾಲ್ ಕ್ರಿಕೆಟ್ ಸೌಹಾರ್ದ ಟೂರ್ನಿಯಲ್ಲಿ ಕೊಡಗು ಜಿಲ್ಲಾ ಶಿಕ್ಷಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಕೊಡಗು ಪ್ರೆಸ್ ಕ್ಲಬ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು.

ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಹಳೆಯ ವಿದ್ಯಾರ್ಥಿಗಳ ಎ ಮತ್ತು ಬಿ ತಂಡದ ಜೊತೆ ಕೊಡಗು ಶಿಕ್ಷಕರ ತಂಡ ಮತ್ತು ಕೊಡಗು ಪ್ರೆಸ್ ಕ್ಲಬ್ ತಂಡಗಳು ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ಫೈನಲ್ ಹಂತ ಪ್ರವೇಶಿಸಿತು.

ಹಳೆಯ ವಿದ್ಯಾರ್ಥಿಗಳ ಸಂಘದ ಎ ಮತ್ತು ಬಿ ತಂಡಗಳ ನಡುವೆ ನಡೆದ ಸೌಹಾರ್ದ ಪಂದ್ಯದಲ್ಲಿ ಎ ತಂಡವು ಬಿ ತಂಡವನ್ನು ಸೋಲಿಸಿತು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕÀ ಕಾವೇರಮ್ಮ ಮಾತನಾಡಿ, ಹಳೆಯ ಗೆಳೆಯರನ್ನು ಸಂಘಟಿಸುವುದು ಬಹಳ ಕಷ್ಟ. ಅದರಲ್ಲೂ ಚಡ್ಡಿದೋಸ್ತ್ ಹೆಸರಿನಲ್ಲಿ ಸಂಘಟನೆ ಮಾಡಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಬಹಳ ಸಂತಸ ತಂದಿದೆ. ಗುರು-ಶಿಷ್ಯರ ಸಮಾಗಮನಕ್ಕೂ ಸಾಕ್ಷಿಯಾಗಿದೆ. ಸವಿ ನೆನಪುಗಳನ್ನು ಮತ್ತೆ ನೆನಪಿಸುವ ಕ್ಷಣ ಇದಾಗಿದೆ ಎಂದರು.

ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಗಣಿತ ಶಿಕ್ಷಕ ಚಂಗಪ್ಪ, ಭಾರತೀಯ ಕಿರಿಯರ ಮಹಿಳಾ ಹಾಕಿ ತಂಡದ ತರಬೇತುದಾರ ಅಂಕಿತ ಸುರೇಶ್ ಮಾತನಾಡಿದರು.

ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಬಾಲಕೃಷ್ಣ ಮತ್ತು ರವಿ ಹಾಗೂ ಶಿಕ್ಷಕರಾದ ಚಂಗಪ್ಪ ಮತ್ತು ಕಾವೇರಮ್ಮ ಹಾಗೂ ಸುಂಟಿಕೊಪ್ಪದ ನಿವೃತ್ತ ಸೈನಿಕ ಶೇಖರ್ ಅವರಿಗೆ ಸಂಘದ ಪರವಾಗಿ ಸನ್ಮಾನಿಸಲಾಯಿತು.

ಟೂರ್ನಿಯಲ್ಲಿ ಉತ್ತಮ ಆಟವಾಡಿದ ಕೊಡಗು ಶಿಕ್ಷಕರ ಸಂಘದ ಆಟಗಾರ ರೋಷನ್ ಪಂದ್ಯ ಪುರುಷೋತ್ತಮ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಅಧ್ಯಕ್ಷ ಎಲ್. ನವೀನ್, ಗುಡ್ಡೆಹೊಸೂರು ಐಎನ್‍ಎಸ್ ಅಕಾಡೆಮಿಯ ಮುಖ್ಯಸ್ಥ ಐಚೆಟ್ಟೀರ ಪೆÇನ್ನಪ್ಪ ಸೋಮಯ್ಯ, ಸುಂಟಿಕೊಪ್ಪದ ನಿವೃತ್ತ ಸೈನಿಕ ಶೇಖರ್, ಸಂಘದ ಉಮ್ಮರ್, ಕೆ.ಎಂ. ವಿನೋದ್, ಹರೀಶ್, ರಾಘವೇಂದ್ರ, ಸುರೇಶ್, ಅರುಣ್, ಮಣಿ ಸೇರಿದಂತೆ ಇತರರು ಇದ್ದರು.