ಶ್ರೀಮಂಗಲ, ಡಿ. 24 : ನಾಗರಹೊಳೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಅರಣ್ಯ ಸಿಬ್ಬಂದಿ ಜಿ. ಗುರುರಾಜ್ (50) ಸಾವಿಗೀಡಾಗಿದ್ದಾರೆ.ನಾಗರಹೊಳೆ ದೊಡ್ಡಹಳ್ಳ ಬೀಟ್, ಮುಖ್ಯ ರಸ್ತೆಯಿಂದ 200 ಮೀಟರ್ ಅಂತರದಲ್ಲಿ ಬೀಟ್‍ಗೆ ತೆರಳಿದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು, ಘಟನೆ ವೇಳೆ ಸ್ಥಳದಲ್ಲಿದ್ದ ವಾಚರ್ ಚಂದ್ರ ಮತ್ತು ಅಶೋಕ್ ಕಾಡಿನಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ. ಅರಣ್ಯ ವೀಕ್ಷಣೆಗೆ ಸಿಬ್ಬಂದಿಗಳು ತೆರಳುತ್ತಿದ್ದ ಸಂದರ್ಭ ಕಾಡಾನೆ ಗುರುರಾಜ್ ಅವರ ಹೊಟ್ಟೆ ಭಾಗಕ್ಕೆ ತಿವಿದ ಪರಿಣಾಮ ಕರಳು ಹೊರಬಂದಿದೆ. ಜೊತೆಗಿದ್ದ ದಿನಗೂಲಿ ವೀಕ್ಷಕ ಚಂದ್ರ ಅವರ ಕಾಲು ಮುರಿದಿದ್ದು, ಅಶೋಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೂಡಲೇ ಕುಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಅಪೆÇೀಲೊ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮದ್ಯೆ ಗುರುರಾಜ್ ಮೃತಪಟ್ಟಿದ್ದಾರೆ. ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಮೊದಲ ಪುಟದಿಂದ) ಗುರುರಾಜ್ ಅವರ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಒಪ್ಪಿಸಲಾಯಿತು.
ಮೃತ ಗುರುರಾಜ್ ಅವರು ವಿವಾಹಿತರಾಗಿದ್ದು, ಪತ್ನಿ ಶೋಭಾ ಅವರೊಂದಿಗೆ ನಾಗರಹೊಳೆ ವಸತಿ ಗೃಹದಲ್ಲಿ ವಾಸವಾಗಿದ್ದರು. ಪುತ್ರ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಪುತ್ರಿ ವಿವಾಹವಾಗಿದ್ದಾರೆ. ಮೃತ ಗುರುರಾಜ್ ಮೂಲತ ಹುಣಸೂರು ಕಲ್ಲುಕುಣಿಕೆ ನಿವಾಸಿಯಾಗಿದ್ದಾರೆ.
ಕುಟ್ಟದಲ್ಲಿ ಮರಣೋತ್ತರ ಪರೀಕ್ಷೆ ಸಂದರ್ಭ ನಾಗರಹೊಳೆ ಡಿ.ಸಿ.ಎಫ್ ಮಹೇಶ್ ಕುಮಾರ್, ಎ.ಸಿ.ಎಫ್ ಗೋಪಾಲ್, ಆರ್.ಎಫ್.ಓ ಅಮಿತ್ ಗೌಡ, ಕುಟ್ಟ ವೃತ್ತ ನಿರೀಕ್ಷಕ ಪರಮಶಿವಮೂರ್ತಿ, ಉಪನಿರೀಕ್ಷಕ ಚಂದ್ರಪ್ಪ ಸಿಬ್ಬಂದಿಗಳು ಹಾಜರಿದ್ದರು.
ಸಂಬಂಧಿಕರ ಆಕ್ರೋಶ : ಮೃತ ಗುರುರಾಜ್ ಅವರ ಪತ್ನಿ ಶೋಭಾ, ಬಾವ ಮೈದ ಕುಮಾರ್ ಅವರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ 30 ವರ್ಷಗಳಿಂದ ಅಡುಗೆ ಕಾರ್ಯ ಮಾಡುತ್ತಿದ್ದ ಗುರುರಾಜ್ ಅವರನ್ನು ಸಿಬ್ಬಂದಿ ಕೊರತೆ ಹಿನ್ನೆಲೆ ಅರಣ್ಯ ವೀಕ್ಷಕರಾಗಿ 2 ವರ್ಷದಿಂದ ನಿಯೋಜಿಸಲಾಗಿದೆ, ವೀಕ್ಷಣೆ ಸಂದರ್ಭ ಕೋವಿಗಳನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ.