ಕಣಿವೆ, ಡಿ. 23: ರಾಜ್ಯದ ಹಾಗೂ ದೇಶದ ಪಶು ವೈದ್ಯ ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಪಿಹೆಚ್‍ಡಿ ವ್ಯಾಸಾಂಗ ಮಾಡುವ ಹಂಬಲವುಳ್ಳ ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಕುರಿತಾದ ತರಬೇತಿ ಹಾಗೂ ಸಂಶೋಧನೆ ನಡೆಸುವ ಸದುದ್ದೇಶದಿಂದ ಮತ್ತು 2008ರಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಅಳುವಾರದಲ್ಲಿ ಆರಂಭವಾದ ಕೊಡಗು ವನ್ಯಜೀವಿ ಹಾಗೂ ಪಶು ವೈದ್ಯಕೀಯ ಸಂಶೋಧನಾ ಕೇಂದ್ರ ಕಳೆದ ಹನ್ನೆರಡು ವರ್ಷಗಳಿಂದಲೂ ಸರ್ಕಾರದ ಕಾಯಕಲ್ಪಕ್ಕಾಗಿ ಕಾಯುತ್ತಿದೆ.ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ ಭಾರತ ದೇಶದಲ್ಲಿಯೇ ಮೊದಲ ಎಂಬ ಹೆಗ್ಗಳಿಕೆಯ ಈ ಸಂಶೋಧನಾ ಕೇಂದ್ರವನ್ನು ಬೀದರ್‍ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡಅಳುವಾರದಲ್ಲಿ ಆರಂಭಿಸಿರುವುದು ರಾಜ್ಯ ಸರ್ಕಾರ ಹಾಗೂ ಕೊಡಗು ಜಿಲ್ಲಾಡಳಿತದ ಹೆಮ್ಮೆಯ ವಿಚಾರವೇ ಸರಿ.

2008 ರಲ್ಲಿ ಅಂದಿನ ರಾಜ್ಯ ಸರ್ಕಾರ ಈ ಕೇಂದ್ರಕ್ಕೆ ಆರಂಭದಿಂದ ಈವರೆಗೂ 6 ಕೋಟಿ ರೂಗಳ ಆಡಳಿತಾತ್ಮಕ ಮಂಜೂರಾತಿ ದೊರಕಿ ದೆಯಾದರೂ ಈವರೆಗೆ ಕೇವಲ ರೂ. 3.2 ಕೋಟಿ ಅನುದಾನವನ್ನು ಬಿಡುಗಡೆಯಾಗಿದೆ. ಈಗಾಗಲೇ ಸುಮಾರು 90 ಎಕರೆಯಷ್ಟು ವಿಶಾಲ ವಿಸ್ತೀರ್ಣದ ಈ ಕೇಂದ್ರದ ಸುತ್ತಲೂ ಬೃಹತ್ ತಡೆಗೋಡೆಯನ್ನು ನಿರ್ಮಿಸುವ ಜೊತೆಗೆ ಆರಂಭಿಕವಾಗಿ ವನ್ಯಜೀವಿಗಳ ಸಂಶೋಧನಾ ವಿದ್ಯಾರ್ಥಿಗಳು ನೋಂದಣಿಯಾದರೆ ಉಳಿದುಕೊಳ್ಳಲು ಅನುಕೂಲವಾಗಲೆಂದು ಸುಸಜ್ಜಿತ ವಸತಿ ನಿಲಯದ ಕಟ್ಟಡವನ್ನು ನಿರ್ಮಿಸಲಾಗಿದೆ.

ಅದಕ್ಕೂ ಮುನ್ನಾ ಸರ್ಕಾರ ಈ ಕೇಂದ್ರವನ್ನು ತೆರೆಯಲು ಅಧಿಕೃತ ಮುದ್ರೆ ಒತ್ತಿದ ನಂತರ 2008 ರ ಜನವರಿ 1 ರಿಂದ ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕೇಂದ್ರದ ಬಳಿ ಆರಂಭವಾದ ಈ ಸಂಶೋಧನಾ ಕೇಂದ್ರ ವಸತಿ ನಿಲಯ ಕಟ್ಟಡ ಕಾಮಗಾರಿ ಮುಗಿದೊಡನೆಯೇ ತಕ್ಷಣವೇ ಕೂಡಿಗೆಯಿಂದ ದೊಡ್ಡಅಳುವಾರಕ್ಕೆ ಈ ಕೇಂದ್ರವನ್ನು ವರ್ಗಾಯಿಸಿತ್ತು.

ಆದರೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಈ ಕೇಂದ್ರ ಆರಂಭವಾಗಿ ಹನ್ನೆರಡು ವರ್ಷಗಳು ಕಳೆದರೂ ಕೂಡ ಇದುವರೆಗೂ ಜಿಲ್ಲೆಯ ಜನಪ್ರತಿನಿಧಿಗಳಾಗಲೀ, ಸರ್ಕಾರವನ್ನು ಪ್ರತಿನಿಧಿಸುವ ಉಸ್ತುವಾರಿ ಮಂತ್ರಿಗಳಾಗಲೀ, ಕೇಂದ್ರವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಲೀ ಈ ಕೇಂದ್ರದತ್ತ ತಮ್ಮ ಚಿತ್ತವನ್ನು ಬೀರದ ಪರಿಣಾಮ ಇದುವರೆಗೂ ಈ ಸಂಶೋಧನಾ ಕೇಂದ್ರ ಇದ್ದೂ ಇಲ್ಲದ ಸ್ಥಿತಿಯಲ್ಲಿ ದಿನಗಳೆಯುತ್ತಿದೆ.

ಮೊದಲು ಸಿಬ್ಬಂದಿಗಳ ನೇಮಕವಾಗಬೇಕು

ಕೂಡಲೇ ರಾಜ್ಯ ಸರ್ಕಾರ ಈ ವನ್ಯಜೀವಿ ಸಂಶೋಧನಾ ಕೇಂದ್ರಕ್ಕೆ ಯುಜಿಸಿ (ಮೊದಲ ಪುಟದಿಂದ) ವೇತನ ಶ್ರೇಣಿಯ ಬೋಧಕರಾದ ಓರ್ವ ನಿರ್ದೇಶಕರ ನೇಮಕ ಮಾಡಬೇಕು. ತಲಾ ನಾಲ್ಕು ಮಂದಿ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರು, ಎಂಟು ಮಂದಿ ಸಹಾಯಕ ಪ್ರಾಧ್ಯಾಪಕರ ನೇಮಕವಾಗಬೇಕು.

ಹಾಗೆಯೇ ಬೋಧಕೇತರ ಸಿಬ್ಬಂದಿಗಳಾದ ಓರ್ವ ಸಹಾಯಕ ಆಡಳಿತಾಧಿಕಾರಿ, ಓರ್ವ ಹಣಕಾಸು ನಿಯಂತ್ರಾಧಿಕಾರಿ, ಓರ್ವ ಸಹಾಯಕ ಕಾರ್ಯಪಾಲಕ ಅಭಿಯಂತರ, ಓರ್ವ ಸಹಾಯಕ ಕುಲಸಚಿವ, ಓರ್ವ ಸಹಾಯಕ ವೈದ್ಯಾಧಿಕಾರಿ, ಓರ್ವ ಗ್ರಂಥಾಧಿಕಾರಿ, ಓರ್ವ ಆಪ್ತ ಕಾರ್ಯದರ್ಶಿ, ಆರು ಮಂದಿ ಸಹಾಯಕರು, ನಾಲ್ಕು ಮಂದಿ ಪ್ರಯೋಗ ಶಾಲೆಯ ಸಹಾಯಕರು, ಇಬ್ಬರು ಚಾಲಕರು ಹಾಗೂ ಒಂಭತ್ತು ಮಂದಿ ಅಟೆಂಡರ್‍ಗಳನ್ನು ಈ ಕೇಂದ್ರಕ್ಕೆ ನೇಮಿಸಬೇಕಿದೆ.

ಈ ನೇಮಕಕ್ಕೆ ಸಂಬಂಧಿಸಿದಂತೆ 2008 ರಿಂದಲೂ ಇಲ್ಲಿನ ಪ್ರಭಾರ ನಿರ್ದೇಶಕರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ವ್ಯವಹಾರ ನಡೆಸುತ್ತಾ ಬಂದಿದ್ದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ವನ್ಯ ಜೀವಿಗಳ ಬಗ್ಗೆ ಪರಿಣತಿ ಪಡೆದ ಪಶುವೈದ್ಯರಿಗೆ ದೇಶದೆಲ್ಲೆಡೆ ಬೇಡಿಕೆ ಇದೆ. ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಹುಲಿಗಳಲ್ಲಿ ಸೋಂಕು ರೋಗ ಕಾಣಿಸಿಕೊಂಡಿತ್ತು. ಈ ಬಗ್ಗೆ ವನ್ಯಜೀವಿ ವಿಜ್ಞಾನದಲ್ಲಿ ಪರಿಣತಿ ಹಾಗೂ ತರಬೇತಿ ಪಡೆದ ಪಶು ವೈದ್ಯರ ಸೇವೆ ಮತ್ತು ಸಂಶೋಧನೆಯ ಅವಶ್ಯಕತೆ ಹೆಚ್ಚಾಗಿರುವುದರಿಂದ ಬೀದರ್‍ನ ಈ ವನ್ಯಜೀವಿಗಳ ಸಂಶೋಧನಾ ವಿಶ್ವ ವಿದ್ಯಾನಿಲಯ ಕೊಡಗಿನಲ್ಲಿ ಈ ಕೇಂದ್ರವನ್ನು ತೆರೆಯಲು ಮುಂದಾಗಿತ್ತು.

ಈಗ ಇಲ್ಲಿ ಅತೀ ತುರ್ತಾಗಿ ಕೇಂದ್ರದ ಮುಖ್ಯ ಕಟ್ಟಡ ನಿರ್ಮಾಣ, ಸಿಬ್ಬಂದಿಗಳ ವಸತಿ ನಿಲಯಗಳು, ಅಂತರ್ರಾಷ್ಟ್ರೀಯ ವಿದ್ಯಾರ್ಥಿ ನಿಲಯ, ಗ್ರಂಥಾಲಯ, ಅತಿಥಿಗೃಹ, ಸಣ್ಣ ಮೃಗಾಲಯಗಳ ಕಾಮಗಾರಿ ಅತೀ ಶೀಘ್ರದಲ್ಲಿ ಆಗಬೇಕಿದೆ.

ಅಲ್ಲದೆ ಮುಖ್ಯ ರಸ್ತೆಯಿಂದ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸರ್ವಋತು ರಸ್ತೆಯಾಗಿ ನಿರ್ಮಿಸಲು ಸರ್ಕಾರ ಮುಂದಾಗಬೇಕಿದೆ.

ಈಗಾಗಲೇ ಈ ಕೇಂದ್ರದಲ್ಲಿ ವಿದೇಶಿ ವಿವಿಗಳ ಅದರಲ್ಲೂ ಅಮೇರಿಕಾದ ಪಡ್ರ್ಯು ವಿವಿ, ಮಿನಿಸೋಟ ವಿವಿ ಹಾಗೂ ಟಾಟಾ ಸಂಸ್ಥೆಗಳೊಂದಿಗೆ ಹೊಂದಾಣಿ ಕೆಯೂ ಆಗಿರುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ಪರಿಣತಿ ಹಾಗೂ ತಂತ್ರಜ್ಞಾನ ವಿನಿಮಯವೂ ಆಗಬೇಕಿದೆ. ಆದ್ದರಿಂದ. ಈ ಮಹತ್ವಾಕಾಂಕ್ಷೆಯ ಕೇಂದ್ರವನ್ನು ಅಭಿವೃದ್ಧಿಪಡಿಸಿ ಮೂಲ ಉದ್ದೇಶ ಹಾಗೂ ಗುರಿಗಳ ಸಾಕಾರಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕಿದೆ.

ಈಗ ಈ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಬೆರಳೆಣಿಕೆಯ ನೌಕರರಿಗೆ ಈಗ ನೀಡುತ್ತಿರುವ ಕನಿಷ್ಟ ವೇತನ ವನ್ನು ಹೆಚ್ಚಿಸುವ ಅನಿವಾರ್ಯತೆ ಯೂ ಇದೆ. ಏಕೆಂದರೆ ದುಬಾರೆ, ಮತ್ತಿಗೋಡು, ನಾಗರಹೊಳೆ, ಬಂಡೀಪುರ, ಬೆಂಗಳೂರು ಮೊದಲಾ ದೆಡೆಗಳಲ್ಲಿ ರೋಗಬಾಧಿತವಾಗಿ ಮೃತಪಟ್ಟ ವನ್ಯಜೀವಿಗಳ ಮಾದರಿ ಯನ್ನು ತಂದು ಈ ಪ್ರಯೋಗಾಲಯದಲ್ಲಿ ಪರೀಕ್ಷಿಸ ಲಾಗುತ್ತಿದೆ. ಈ ಕೇಂದ್ರದಲ್ಲಿ ಕೇವಲ ಓರ್ವರು ಪ್ರಯೋಗ ಶಾಲಾ ತಂತ್ರಜ್ಞರನ್ನು ಹೊರತುಪಡಿಸಿದರೆ ಬೇರೆ ಯಾವ ಹುದ್ದೆಗಳೂ ಭರ್ತಿಯಾಗಿ ರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಕೇಂದ್ರದ ಕಾಯಕಲ್ಪಕ್ಕೆ ಕೊಡಲು ಇನ್ನಾದರೂ ಮುಂದಾಗಬೇಕಿದೆ.

-ವಿಶೇಷ ವರದಿ : ಕೆ.ಎಸ್.ಮೂರ್ತಿ