ಮಡಿಕೇರಿ, ಡಿ. 22: ಗ್ರಾ.ಪಂ.ಗಳ ಸಾರ್ವತ್ರಿಕ ಚುನಾವಣೆ-2020ರ ಹಿನ್ನೆಲೆಯಲ್ಲಿ ಮಡಿಕೇರಿ ತಾಲೂಕು ಕುಂಜಿಲ (ಕಕ್ಕಬೆ) ಗ್ರಾ.ಪಂ.ನ ನಾಲಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಪತ್ರದಲ್ಲಿ ಚುನಾವಣಾ ಚಿಹ್ನೆ ಬದಲಾವಣೆ ಆಗಿರುವ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಿದ್ದಾರೆ.
ಮಡಿಕೇರಿ ತಾಲೂಕು ಕುಂಜಿಲ (ಕಕ್ಕಬೆ) ಗ್ರಾ.ಪಂ.ನ ನಾಲಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಯು ತಾ. 14.12.2020 ರಂದು ಅಭ್ಯರ್ಥಿಗಳ ಸಭೆಯನ್ನು ನಡೆಸಿ ಅಭ್ಯರ್ಥಿಗಳ ಸಮಕ್ಷಮ ಚಿಹ್ನೆಯನ್ನು ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನಡವಳಿಯನ್ನು ಮಾಡಲಾಗಿದ್ದು, ಕರುಂಬಯ್ಯ (ಕಸ್ತೂರಿ) ಇವರಿಗೆ ಟ್ರಕ್ ಚಿಹ್ನೆಯನ್ನು ನೀಡಿರುವುದಾಗಿದೆ. ಅಭ್ಯರ್ಥಿಯು ನಡವಳಿಯಲ್ಲಿ ಸಹಿಯನ್ನು ಸಹ ಮಾಡಿದ್ದಾರೆ. ಅಭ್ಯರ್ಥಿಗೆ ಚಿಹ್ನೆ ಹಂಚಿಕೆ ಮಾಡಿರುವಂತೆಯೇ ಮತ ಪತ್ರವನ್ನು ಮುದ್ರಿಸಿ ಮತಗಟ್ಟೆಗೆ ವಿತರಿಸಲಾಗಿದೆ ಮತ್ತು ಚಿಹ್ನೆ ಹಂಚಿಕೆ ಸಮಯದಲ್ಲಿ ಎಲ್ಲಾ ನಿಯಮಗಳನ್ನು ಅನುಸರಿಸಲಾಗಿದೆ. ಅದರಂತೆ ಮತಪತ್ರವನ್ನು ಮುದ್ರಿಸಲಾಗಿದೆ.