ಮಡಿಕೇರಿ, ಡಿ. 23: ಮಂಗಳವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಡಿಕೇರಿ ತಾಲೂಕಿನ 676 ಅಭ್ಯರ್ಥಿಗಳ ಭವಿಷ್ಯ ಸೇರಿದಂತೆ ಸೋಮವಾರಪೇಟೆ ತಾಲೂಕಿನ 1,488 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಬಂಧಿಯಾಗಿದೆ. ಕಳೆದ ಒಂದು ತಿಂಗಳ ಅವಧಿಯಿಂದ ಗ್ರಾಮ ಪಂಚಾಯಿತಿ ಅಖಾಡಕ್ಕಿಳಿದು ಜನತೆಯ ಕೃಪಾಕಟಾಕ್ಷ ಪಡೆಯಲು ಹೆಣಗಾಡಿದ ಅಭ್ಯರ್ಥಿಗಳು ಮಂಗಳವಾರದ ಮತದಾನದ ಬಳಿಕ ತುಸು ನಿರಾಳರಾಗಿದ್ದು, ತಾ. 30 ರ ಮತ ಎಣಿಕೆಯ ದಿನದ ಕನವರಿಕೆಯಲ್ಲಿ ಮುಳುಗಿದ್ದಾರೆ. ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಸಂತ ಜೋಸೆಫರ ಶಾಲೆಯಲ್ಲಿ ತಾ. 30 ರಂದು ಮತಎಣಿಕೆ ನಡೆಯಲಿದ್ದು, ಮತಪೆಟ್ಟಿಗೆಗಳನ್ನು ಭದ್ರತೆಯಲ್ಲಿಡಲಾಗಿದೆ. ಅದೇ ರೀತಿ ಸೋಮವಾರಪೇಟೆ

(ಮೊದಲ ಪುಟದಿಂದ) ತಾಲೂಕಿಗೆ ಸಂಬಂಧಿಸಿದಂತೆ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ಉತ್ತಮ ರೀತಿಯ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಸುಮಾರು 25ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ದಿನಪೂರ್ತಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತಪೆಟ್ಟಿಗೆಗಳನ್ನು ಭದ್ರವಾಗಿ ಕೊಠಡಿಗಳಲ್ಲಿ ಇಡಲಾಗಿದ್ದು, ಮರದ ಹಲಗೆಗಳಿಂದ ಕೊಠಡಿಯ ಬಾಗಿಲು, ಕಿಟಕಿಗಳನ್ನು ಮುಚ್ಚಲಾಗಿದೆ.

ಕಣಿವೆ: ತಮಗಿಚ್ಛೆ ಬಂದ ಜನಪ್ರತಿನಿಧಿಗೆ ಮತದಾನವೆಂಬ "ಅಚ್ಚು" ಒತ್ತಿರುವ ಮತದಾರರ ಚೀಟಿಗಳಿರುವ ಮತಪೆಟ್ಟಿಗೆಗಳನ್ನು ಕುಶಾಲನಗರ ಬಳಿಯ ಸುಂದರನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾಧಿ ಕಾರಿಗಳು ನಿಗದಿಪಡಿಸಿರುವ ಸ್ಟ್ರಾಂಗ್ ಕೊಠಡಿಯಲ್ಲಿ ಇಟ್ಟು, ಆ ಕೊಠಡಿಯ ಸುತ್ತಾ ಇದ್ದಂತಹ ಕಿಟಕಿ ಹಾಗೂ ಬಾಗಿಲುಗಳನ್ನು ಮರದ ಹಲಗೆಗಳಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ. ಹೀಗೆ ಮುಚ್ಚಲ್ಪಟ್ಟ ಮತಪೆಟ್ಟಿಗೆಯ ಕೊಠಡಿ ಇರುವ ಇಡೀ ಕಾಲೇಜಿಗೆ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲಾ ಮತ ಪೆಟ್ಟಿಗೆಗಳನ್ನು ತಂದು ರಾತ್ರಿಯೇ ಇಟ್ಟಿರುವ ಈ ಕೊಠಡಿಗೆ ಓರ್ವ ವೃತ್ತ ನಿರೀಕ್ಷಕ, ಓರ್ವ ಉಪ ನಿರೀಕ್ಷಕ, ಮೂವರು ಎಎಸ್‍ಐಗಳು, ನಾಲ್ವರು ಮುಖ್ಯ ಪೇದೆಗಳು, 8 ಮಂದಿ ಪೆÇಲೀಸ್ ಪೇದೆಗಳು, ಒಂದು ಜಿಲ್ಲಾ ಸಶಸ್ತ್ರ ಪೆÇಲೀಸರ ತುಕಡಿ ಹಾಗೂ ಒಂದು ಅಗ್ನಿಶಾಮಕ ವಾಹನದೊಂದಿಗೆ ಸಿಬ್ಬಂದಿಗಳನ್ನು ನಿಯೋಜಿಸ ಲಾಗಿದೆ.

ಇದೇ ತಿಂಗಳ ತಾ. 30 ರಂದು ನಡೆಯುವ ಮತ ಎಣಿಕೆಯ ದಿನದವರೆಗೂ ರಾತ್ರಿ ಹಾಗೂ ಹಗಲು ಎರಡು ಪಾಳಿಯಲ್ಲಿ ಬಿಗಿಯಾದ ಪೆÇಲೀಸ್ ಬಂದೋಬಸ್ತ್ ನಡೆಯಲಿದೆ ಎಂದು ತಾಲೂಕಿನ ಚುನಾವಣಾಧಿ ಕಾರಿಗಳೂ ಆದ ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆಗಳ ಮತ ಎಣಿಕೆ ಕಾರ್ಯ ಈ ಮೊದಲು ತಾಲೂಕು ಕೇಂದ್ರ ಸೋಮ ವಾರಪೇಟೆಯ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ನಡೆಯುತ್ತಿತ್ತು. ಆದರೆ ಇದೇ ಮೊದಲು ಕುಶಾಲನಗರದ ಹೊರಭಾಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆಯುತ್ತಿ ರುವುದರಿಂದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ವ್ಯಾಪ್ತಿಯ 40 ಗ್ರಾಮ ಪಂಚಾಯಿತಿಗಳ 1,488 ಅಭ್ಯರ್ಥಿಗಳೊಂದಿಗೆ ಅವರ ಬೆಂಬಲಿತ ಸಾವಿರಾರು ಜನರು ತಾ. 30 ರಂದು ಧಾವಿಸುವ ಕಾರಣದಿಂದ ಶಾಂತಿಯುತವಾದ ಮತ ಎಣಿಕೆ ಪ್ರಕ್ರಿಯೆ ನಡೆಸಿಕೊಡಲು ಪೂರಕವಾದ ಸಿದ್ಧತೆ ನಡೆಸಿರುವುದಾಗಿ ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.

ಚುನಾವಣಾ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು

ಸೋಮವಾರಪೇಟೆ : ನಿನ್ನೆಯಷ್ಟೇ ಮುಕ್ತಾಯಗೊಂಡ ಪ್ರಥಮ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಇಂದು ವಿಶ್ರಾಂತಿಯ ಮೊರೆ ಹೋಗಿದ್ದು, ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಕಳೆದ 15 ದಿನಗಳಿಂದಲೂ ಎಡೆಬಿಡದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಇದೀಗ ತಮ್ಮ ತಮ್ಮ ವಾರ್ಡ್‍ನಲ್ಲಿ ನಡೆದ ಮತದಾನದ ವಿವರಗಳನ್ನು ಪಡೆದುಕೊಂಡು ಸೋಲು-ಗೆಲುವಿನ ಬಗ್ಗೆ ತಾಳೆ ಹಾಕುತ್ತಿದ್ದಾರೆ.

ತಮ್ಮ ತಮ್ಮ ವಾರ್ಡ್‍ನಲ್ಲಿ ಆಗಿರುವ ಮತದಾನದ ವಿವರ, ತಮ್ಮ ಬೆಂಬಲಿಗರು, ಅವರ ಕುಟುಂಬಸ್ಥರೆಲ್ಲರೂ ಮತದಾನ ಮಾಡಿದ್ದಾರೋ? ಎದುರಾಳಿಗೆ ಹೋಗಿರಬಹುದಾದ ಮತಗಳೆಷ್ಟು? ಎಷ್ಟು ಮಂದಿ ‘ಸಿಂಗಲ್ ವೋಟ್’ ಹಾಕಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕಿಕೊಂಡು ತಮ್ಮ ಸೋಲು-ಗೆಲುವಿನ ಬಗ್ಗೆ ಲೆಕ್ಕಾಚಾರ ನಡೆಸುತ್ತಿದ್ದಾರೆ.

ಇದರೊಂದಿಗೆ ಮೀಸಲಾತಿಯ ಬಗ್ಗೆಯೂ ಭಯಗೊಂಡಿರುವ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು, ಮೀಸಲಾತಿಯಡಿ ನಮ್ಮೊಂದಿಗೆ ಸಿಂಡಿಕೇಟ್‍ನಲ್ಲಿದ್ದ ಮಂದಿ ಹೆಚ್ಚು ಮತ ಪಡೆದರೆ ನಮಗೇ ಕಷ್ಟವಾಗಬಹುದು. ನಮ್ಮ ಎದುರಾಳಿ ತಂಡದಲ್ಲಿದ್ದವರು ಮೀಸಲಾತಿಯಡಿ ಹೆಚ್ಚು ಮತಪಡೆದರೂ ನಮಗೆ ತೊಂದರೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಹೀಗಾಗಿ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅನೇಕ ಮಂದಿ ಅಭ್ಯರ್ಥಿಗಳು ಕೊನೆಕ್ಷಣದಲ್ಲಿ ಸಿಂಡಿಕೇಟ್ ಮರೆತು ‘ಸಿಂಗಲ್ ವೋಟ್’ ಕೇಳಿದ್ದು, ಇದು ಎಷ್ಟರ ಮಟ್ಟಿಗೆ ‘ವರ್ಕೌಟ್ ಆಗಿದೆ’ ಎಂಬುದನ್ನು ಕಾದುನೋಡಬೇಕಿದೆ.