ಗೋಣಿಕೊಪ್ಪಲು, ಡಿ. 22: ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ಕೊಡವ ಸ್ವಾಭಿಮಾನಿ ಬಳಗದ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಮ್ಮತ್ತಿಯ ನಗರದಲ್ಲಿ ಕೊಡವ ಬಂಧುಗಳು, ನೂರಾರು ಸಂಖ್ಯೆಯಲ್ಲಿ ಸೇರುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಬೋಸ್ ದೇವಯ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿ ಕೊಡವರ ಮನಸ್ಸನ್ನು ನೋಯಿಸಿದ್ದಾರೆ. ಕೊಡಗು ಜಿಲ್ಲೆಗೆ ಖುದ್ದು ಆಗಮಿಸುವ ಮೂಲಕ ಅವರು ಕ್ಷಮೆಯಾಚಿಸಬೇಕು. ಇಲ್ಲವಾದರೆ ಕೊಡಗು ಜಿಲ್ಲೆಗೆ ಚುನಾವಣಾ ಸಂದರ್ಭ ಸಿದ್ದರಾಮಯ್ಯ ಆಗಮಿಸಿದರೆ ಸಂದರ್ಭ ಪ್ರತಿಭಟಿಸಲಾಗುವುದೆಂದು ಬೋಸ್ ದೇವಯ್ಯ ಎಚ್ಚರಿಸಿದರು.

ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಸ್ವಾಭಿಮಾನಿ ಕೊಡವರ ಭಾವನೆಯನ್ನು ಸಿದ್ದರಾಮಯ್ಯ ಕೆರಳಿಸಿದ್ದಾರೆ. ಹಗುರವಾದ ಹೇಳಿಕೆಯನ್ನು ನೀಡುವ ಮೂಲಕ ತೇಜೋವಧೆ ಮಾಡಿದ್ದಾರೆ. ನಂತರ ಟ್ವೀಟ್ ಮಾಡಿ ವಿಷಾಧ ವ್ಯಕ್ತಪಡಿಸಿದ್ದೇನೆಂದು ಹೇಳುವುದು ಸರಿಯಲ್ಲ. ಕೊಡಗಿನಲ್ಲಿ ಗೋವುಗಳನ್ನು ಪೂಜನೀಯ ಭಾವದಲ್ಲಿ ಆರಾಧಿಸುತ್ತೇವೆ. ಯುವಕರು ಕೇವಲ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಚರ್ಚಿಸುವ ಬದಲು ರಸ್ತೆಗಿಳಿದು ಹೋರಾಟ ಮಾಡಬೇಕು ಎಂದರು.

ಊರಿನ ಹಿರಿಯ ಮುಖಂಡರಾದ ಐನಂಡ ಜಪ್ಪು ಮಾತನಾಡಿ, ಸಿದ್ದರಾಮಯ್ಯ ಮನಬಂದಂತೆ ಮಾತನಾಡಿ ಕೊಡವರ ಭಾವನೆಗೆ ಚ್ಯುತಿ ತಂದಿದ್ದಾರೆ. ಈ ಹಿಂದೆ ಟಿಪ್ಪು ಜಯಂತಿ ನಡೆಸಿ ಕೊಡಗಿನಲ್ಲಿ ಆಶಾಂತಿ ಸೃಷ್ಟಿಸಿದ್ದರು. ಇದೀಗ ಕೊಡವರ ವಿರುದ್ಧ ಹೇಳಿಕೆ ನೀಡಿ ಮತ್ತೊಮ್ಮೆ ಸಾಮರಸ್ಯವನ್ನು ಹಾಳುಮಾಡಿದ್ದಾರೆ. ಕೊಡವ ಸಂಸ್ಕøತಿ, ಆಚಾರ, ವಿಚಾರಗಳನ್ನು ಮೊದಲು ಇವರು ಅಧ್ಯಯನ ಮಾಡಲಿ. ಬ್ರಿಟೀಷರ ಕಾಲದಲ್ಲಿ ಕೊಡಗಿನಲ್ಲಿ ಗೋಹತ್ಯೆ ನಿಷೇಧಿಸಲಾಗಿತ್ತು ಎಂದು ತಿಳಿಯಲಿ, ರಾಜಕೀಯ ರಹಿತವಾಗಿ ಕೊಡವರು ಒಂದಾಗಬೇಕು ಎಂದು ತಿಳಿಸಿದರು.

ಪ್ರತಿಭಟನೆ ವೇಳೆ ಮುಖಂಡರಾದ ಮಾಚಿಮಂಡ ವಸಂತ್, ಮಾಚಿಮಂಡ ಮಧು ಮಾದಪ್ಪ, ಕಾವಡಿಚಂಡ ಯು. ಗಣಪತಿ, ಮೊಳ್ಳೆರ ರತನ್ ಪೂಣಚ್ಚ, ಕುಟ್ಟಂಡ ವಿನು ಪೂವಯ್ಯ, ಮುಕ್ಕಾಟೀರ ಬೋಪಣ್ಣ, ಮಾಚಿಮಂಡ ಪ್ರಸಾದ್, ನೆಲ್ಲಮಕ್ಕಡ ಸಂಪತ್, ಮಾಚಿಮಂಡ ಸುರೇಶ್ ಅಯ್ಯಪ್ಪ, ಕುಞಂಡ ನಾಣಯ್ಯ, ಕಾವಡಿಚಂಡ ನಾಚಪ್ಪ, ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಗ್ರಾಮಸ್ಥರು ಭಾಗವಹಿದ್ದರು. ಪ್ರತಿಭಟನೆ ವೇಳೆ ನಗರದಲ್ಲಿ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವೀರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.