ಮಡಿಕೇರಿ, ಡಿ. 23: ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿಗೆ ಸಂಬಂಧಿಸಿದಂತೆ ಪ್ರಸ್ತುತ ಕಟಾವು ಕೆಲಸ ಪ್ರಗತಿಯಲ್ಲಿದೆ. ಗ್ರಾ.ಪಂ. ಚುನಾವಣೆಯ ಭರಾಟೆ ಒಂದೆಡೆಯಾದರೆ ಕೃಷಿ ಅವಲಂಬಿತ ರೈತರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ಕೆಲವು ದಿನಗಳ ಹಿಂದೆ ವಾತಾವರಣದಲ್ಲಿ ಉಂಟಾಗಿದ್ದ ಅಸಹಜತೆಯಿಂದಾಗಿ ಭತ್ತದ ಕುಯಿಲು ಮಾಡಲು ಹಾಗೂ ಕುಯಿಲು ಮಾಡಿದ್ದ ಬೆಳೆಯನ್ನು ಸುಭದ್ರವಾಗಿ ತುಂಬಿಸಿಕೊಳ್ಳಲು ಅಡಚಣೆ ಯುಂಟಾಗಿತ್ತಲ್ಲದೆ ರೈತರು ಕೊನೆಯ ಹಂತದಲ್ಲಿ ಆತಂಕವನ್ನು ಎದುರಿಸುವಂತಾಗಿತ್ತು. ಪ್ರಸ್ತುತವೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣದಿಂದಾಗಿ ಮೋಡ ಕವಿದ ವಾತಾವರಣ ಕಂಡು ಬರುತ್ತಿರುವು ದರಿಂದ ಬೆಳೆದ ಫಸಲನ್ನು ತ್ವರಿತಗತಿಯಲ್ಲಿ ಮನೆತುಂಬಿಸಿಕೊಳ್ಳಲು ರೈತಾಪಿ ವರ್ಗ ಬಿರುಸಿನ ಚಟುವಟಿಕೆ ನಡೆಸಿದೆ. ಕೃಷಿ ಇಲಾಖೆಯ ಅಂದಾಜಿನಂತೆ ಈತನಕ ಜಿಲ್ಲೆಯಲ್ಲಿ ಶೇ.50ರಷ್ಟು ಭತ್ತದ ಕಟಾವು ಮುಗಿದಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಇದು ಶೇ.70ರಿಂದ 80ರಷ್ಟು ಪ್ರಮಾಣ ತಲುಪಲಿದ್ದು, ಜನವರಿ ಎರಡನೆಯ ವಾರದ ತನಕವೂ ಅಲ್ಲಲ್ಲಿ ವಿವಿಧ ತಳಿಗಳ ಭತ್ತದ ಕುಯಿಲು ಮುಂದುವರಿಯುವ ಸಾಧ್ಯತೆಯಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 30,400 ಹೆಕ್ಟೇರ್‍ನಲ್ಲಿ (ಮೊದಲ ಪುಟದಿಂದ) ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತಾದರೂ ಇದರಲ್ಲಿ 23,737 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕೃಷಿ ನಡೆದಿದೆ. ವನ್ಯ ಪ್ರಾಣಿಗಳ ಕಾಟ, ಕಳೆದ ಮೂರು ವರ್ಷಗಳಿಂದ ಸತತವಾಗಿ ಉಂಟಾಗಿರುವ ಪ್ರಾಕೃತಿಕ ವಿಕೋಪ ಮತ್ತಿತರ ಕೆಲವು ಕಾರಣಗಳಿಂದ ಉದ್ದೇಶಿತ ಗುರಿ ಸಾಧನೆಯಲ್ಲಿ ಹಿನ್ನಡೆಯಾಗದೆ. ಇದಲ್ಲದೆ, ರೈತರು ಭತ್ತ ಬೆಳೆಯುವತ್ತ ತೋರುತ್ತಿರುವ ನಿರಾಸಕ್ತಿಯೂ ಮತ್ತೊಂದು ಕಾರಣವಾಗಿದೆ ಎನ್ನುತ್ತಾರೆ. ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು ಅವರು ಜಿಲ್ಲೆಯಲ್ಲಿ ಅತಿರಾ, ತುಂಗಾ, ಐ.ಆರ್.64, ತನು, ಮತ್ತಿತರ ತಳಿಯ ಭತ್ತವನ್ನು ಬೆಳೆಯಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 5065 ಹೆಕ್ಟೇರ್, ವೀರಾಜಪೇಟೆಯಲ್ಲಿ 9,462 ಹೆಕ್ಟೇರ್ ಹಾಗೂ ಸೋಮವಾರಪೇಟೆಯಲ್ಲಿ 9.210 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಯಂತ್ರೋಪಕರಣಗಳ ಮೂಲಕ ಹಾಗೂ ರೈತರೇ ನೇರವಾಗಿ ಕುಯಿಲು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಸುಕಿನ ಜೋಳಕ್ಕೆ ಸಂಬಂಧಿಸಿದಂತೆ ಶೇ.100ರಷ್ಟು ಕಟಾವು ಪೂರ್ಣ ಗೊಂಡಿರುವುದಾಗಿ ರಾಜು ಅವರು ತಿಳಿಸಿದರು. ಹೆಚ್ಚಾಗಿ ಉತ್ತರ ಕೊಡಗಿನಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಈ ಬಾರಿ 4 ಸಾವಿರ ಹೆಕ್ಟೇರ್ ಪ್ರದೇಶದ ಗುರಿ ಹೊಂದಲಾಗಿತ್ತು. ಇದರಲ್ಲಿ 3050 ಹೆಕ್ಟೇರ್‍ನಲ್ಲಿ ಮುಸುಕಿನ ಜೋಳ ಬೆಳೆಯಲಾಗಿದ್ದು, ಇದರ ಕೆಲಸ ಪೂರ್ಣಗೊಂಡಿರುವುದಾಗಿ ಅವರು ಮಾಹಿತಿಯಿತ್ತರು.