ಕಣಿವೆ, ಡಿ. 22: ಮಂಗಳವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಕುಶಾಲನಗರ ಹೋಬಳಿಯ ಅನೇಕ ಕಡೆಗಳಲ್ಲಿ ಬಹುತೇಕ ಶಾಂತಿಯುತವಾಗಿ ನಡೆಯಿತು. ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದರಿಂದ ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಚುನಾಯಿಸಲು ಒಲವು ತೋರಿದ ಮತದಾರರು ಮತಗಟ್ಟೆಗಳ ಬಳಿ ಧಾವಿಸಿ ಬಂದು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಸರ್ಕಾರಿ ಶಾಲೆಗಳನ್ನು ಮತಗಟ್ಟೆಗಳ ಕೇಂದ್ರಗಳಾಗಿ ಮಾಡಿದ್ದರಿಂದ ಕಳೆದ ಹತ್ತು ತಿಂಗಳಿಂದ ಶಾಲೆಗಳತ್ತ ಮಕ್ಕಳು ಧಾವಿಸದೇ ನಿರ್ಜನ ಪ್ರದೇಶವಾಗಿದ್ದ ಶಾಲಾ ವಠಾರಗಳು ಮಂಗಳವಾರ ಮತದಾನ ಪ್ರಕ್ರಿಯೆಯ ನಿಮಿತ್ತ ಜನಜಂಗುಳಿಯಿಂದ ಕೂಡಿದ್ದವು. ಮತಗಟ್ಟೆಗಳಿಂದ ನೂರು ಮೀಟರ್ ಅಂತರದಲ್ಲಿ ಯಾವುದೇ ಪ್ರಚಾರ ಮಾಡುವಂತಿಲ್ಲ. ಗುಂಪು ಕೂಡ ಸೇರುವಂತಿಲ್ಲ ಎಂಬ ನಿಯಮಗಳಿದ್ದಾಗ್ಯೂ ಅನೇಕ ಕಡೆಗಳಲ್ಲಿ ಅಭ್ಯರ್ಥಿಗಳು ಹಾಗೂ ಅವರ ಅವಲಂಬಿತರು ಅಲ್ಲಲ್ಲಿ ನಿಂತು ಮತದಾರರನ್ನು ಓಲೈಸುತ್ತಿದ್ದುದು ಕಂಡು ಬಂತು. ಹಲವು ಕಡೆಗಳಲ್ಲಿ ಶಾಮಿಯಾನ ಅಳವಡಿಸಿ ಅದರಡಿ ಕುರ್ಚಿಗಳು ಹಾಗೂ ಟೇಬಲ್‍ಗಳನ್ನಿಟ್ಟು ಅದರ ಮೇಲೆ ಆಯಾಯ ಅಭ್ಯರ್ಥಿಗಳ ಚಿಹ್ನೆಗಳನ್ನಿಟ್ಟು ಮತದಾರರನ್ನು ಸೆಳೆಯುತ್ತಿದ್ದುದು ಕಂಡು ಬಂತು.

ಕೆಲವು ಮತಗಟ್ಟೆ ಕೇಂದ್ರಗಳ ಬಳಿ ಅಭ್ಯರ್ಥಿಗಳ ಅವಲಂಬಿತರ ಕುಟುಂಬ ಸದಸ್ಯರೆಲ್ಲರೂ ಮಕ್ಕಳೊಡಗೂಡಿ ರಸ್ತೆ ಬದಿಯಲ್ಲಿ ನಿಂತು ಪ್ರಚಾರ ಮಾಡುತ್ತಿದ್ದುದು ಕಂಡು ಬಂತು. ಮತ್ತೆ ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳ ವಾಹನಗಳಲ್ಲಿ ಮತದಾರರನ್ನು ಮನೆಗಳಿಂದ ಕರೆತಂದು ಮತ ಚಲಾಯಿಸಿ ವಾಪಸ್ ಅದೇ ವಾಹನಗಳಲ್ಲಿ ಮನೆಗಳಿಗೆ ಒಯ್ಯುತ್ತಿದ್ದುದು ಕಂಡು ಬಂತು.

ಹೆಬ್ಬಾಲೆ ಗ್ರಾಮದಲ್ಲಿ ಸಮಯ 12-30 ಆದರೂ ಕೂಡ ಮತದಾನ ಪ್ರಕ್ರಿಯೆ ವಿಳಂಬವಾಗಿಯೇ ನಡೆಯುತ್ತಿದ್ದುದರಿಂದ ಬೇಸತ್ತ ಮಹಿಳೆಯರು ಶಾಲಾವರಣದಲ್ಲಿನ ಗಿಡ ಮರಗಳ ಮತ್ತು ಬೇಲಿಯ ನೆರಳಿನಲ್ಲಿ ಕುಳಿತು ಆಶ್ರಯ ಪಡೆದುದು ಕಂಡು ಬಂತು.

ಇನ್ನು ಮತಗಟ್ಟೆಯ ಹೊರಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್. ರಘು ಎಂಬವರು ನಿಯಮಗಳನ್ನು ಉಲ್ಲಂಘಿಸಿ ಪೆÇಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣ ಲಾಠಿಯನ್ನು ಬೀಸಿ ಅವರನ್ನು ಪೆÇಲೀಸರು ಹೊರಗೆ ಕಳಿಸಿದ ಪ್ರಸಂಗವೂ ಜರುಗಿತು.

ಇನ್ನು ತೊರೆನೂರು ಮತಗಟ್ಟೆ ಬಳಿ ಅಭ್ಯರ್ಥಿಗಳು ತಮಗೆ ಸಿಕ್ಕ ಬೆಂಕಿ ಪೆÇಟ್ಟಣ, ಟಯರ್ ಚಿಹ್ನೆಗಳನ್ನು ಪ್ರದರ್ಶನಕ್ಕಿಟ್ಟು ಮತದಾರರ ಮನವನ್ನು ಸೆಳೆದರು. ಇನ್ನು ಸಿದ್ದಲಿಂಗಪುರ ಮತಗಟ್ಟೆಯ ಬಳಿ ಅಭ್ಯರ್ಥಿಗಳಾದ ಎಂ.ಟಿ. ಬೇಬಿ, ಸತೀಶ್ ಕುಮಾರ್, ರವಿಕುಮಾರ್ ಮೊದಲಾದವರು ಪರಸ್ಪರ ಸಾಮರಸ್ಯದ ಬೆಸುಗೆಯಿಂದ ಇದ್ದದ್ದು ಮತದಾರರನ್ನು ಅಚ್ಚರಿಗೊಳಿಸುವಂತಿತ್ತು.

ಸೋಮವಾರಪೇಟೆ ತಾಲೂಕು ದಂಡಾಧಿಕಾರಿಗಳೂ ಆದ ತಹಶೀಲ್ದಾರ್ ಗೋವಿಂದರಾಜು, ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ದೇವರು, ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಪೆÇಲೀಸ್, ಕಂದಾಯ ಹಾಗೂ ಆಶಾ ಕಾರ್ಯಕರ್ತ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದರು.

- ವರದಿ : ಕೆ.ಎಸ್. ಮೂರ್ತಿ