ಮಡಿಕೇರಿ, ಡಿ. 22: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಯ ಮದೆನಾಡು ಗ್ರಾಮದಲ್ಲಿ ಕಳೆದ ರಾತ್ರಿ ಇಬ್ಬರು ಅಕ್ರಮವಾಗಿ ಬೇಟೆಗೆಂದು ತೆರಳಿದ್ದ ಸಂದರ್ಭ ಗುಂಡೇಟಿಗೆ ಯುವಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ.ಅಲ್ಲಿನ ನಿವಾಸಿ ಪರಮೇಶ್ವರ್ (ಕಿರಣ್-31) ಎಂಬವರು ಗುಂಡೇಟಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಸುಮಾರು 8.30 ರ ಸುಮಯದಲ್ಲಿ ಪರಮೇಶ್ವರ್ ಹಾಗೂ ಬೆಳ್ಯಪ್ಪ (ಸತೀಶ್) ಎಂಬವರು ತೋಟದ ಸನಿಹದ ಕಾಡಿನತ್ತ ಬೇಟೆಗೆಂದು ತೆರಳಿದ್ದರೆನ್ನಲಾಗಿದೆ. ಈ ಸಂದರ್ಭ ಬೆಳ್ಯಪ್ಪ ಹಾರಿಸಿರುವ ಗುಂಡು ಪರಮೇಶ್ವರ್‍ಗೆ ತಗುಲಿದ್ದು ಅವರು ಮೃತಪಟ್ಟಿದ್ದಾರೆ. ಯಾವ ರೀತಿಯಲ್ಲಿ ಗುಂಡು ಹಾರಿಸಲಾಗಿದೆ ಎಂಬ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಳ್ಯಪ್ಪನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪರಮೇಶ್ವರ್ ಸಾವಿನ ಬಗ್ಗೆ ಅವರ ಸಹೋದರ ಕೀರ್ತನ್ ಪೊಲೀಸರಿಗೆ ದೂರು ನೀಡಿದ್ದು, ಇದು ಕೊಲೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ಸೆಕ್ಷನ್ 302 ರಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಇಬ್ಬರು ಬೇಟೆಗೆಂದು ತೆರಳಿದ್ದು, ಘಟನೆ ಆಕಸ್ಮಿಕವಾಗಿ ನಡೆದಿದೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಸಂಶಯ ವ್ಯಕ್ತಗೊಂಡಿರುವದರಿಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿ ಬೆಳ್ಯಪ್ಪನನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಪರಮೇಶ್ವರ್ ಮದೆನಾಡಿನ ಕೆ.ಆರ್. ಹನುಮಯ್ಯ ಎಂಬವರ ಪುತ್ರನಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹೆಚ್ಚಿನ ವಿವರ ಪೊಲೀಸ್ ವಿಚಾರಣೆ ಬಳಿಕವಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ದಿನೇಶ್‍ಕುಮಾರ್, ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದರು.