ಗೋಣಿಕೊಪ್ಪ ವರದಿ, ಡಿ. 21 ; ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ, ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಸಹಯೋಗದಲ್ಲಿ ನಡೆದ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್‍ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಹಣಾಹಣಿಯಲ್ಲಿ ನೀರಸ ಸೋಲನುಭವಿಸಿದ ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫೈನಲ್‍ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವು 3-0 ಗೋಲುಗಳಿಂದ ಗೆದ್ದು ಬೀಗಿತು. 18 ನೇ ನಿಮಿಷದಲ್ಲಿ ಉತ್ತಪ್ಪ, 23 ನೇ ನಿಮಿಷದಲ್ಲಿ ನಾಗೇಶ್, 58 ನೇ ನಿಮಿಷದಲ್ಲಿ ಐಚಂಡ ಪಳಂಗಪ್ಪ ಗೋಲು ಹೊಡೆದು ಗೆಲುವು ತಂದರು. ಪ್ರಗತಿ ಸ್ಪೋಟ್ರ್ಸ್ ತಂಡವು ನೀರಸ ಪ್ರದರ್ಶನ ನೀಡಿತು ದೊರೆತ 6 ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೈಚೆಲ್ಲಿತು. ಫೇರ್ ಪ್ಲೇ ಟ್ರೋಫಿಯನ್ನು ಸೌತ್‍ಕೂರ್ಗ್ ಕ್ಲಬ್, ಶಿಸ್ತುಬದ್ಧ ಪ್ರಶಸ್ತಿಯನ್ನು ಜೀಯಣ್ಣ ಗ್ರೂಪ್ ಪಡೆದುಕೊಂಡಿತು. ಬೆಸ್ಟ್ ಸಾಧಕರು: ಪವಿನ್ ಪೊನ್ನಣ್ಣ ಫೌಂಡೇಷನ್ ತಂಡದ ಐಚಂಡ ಪಳಂಗಪ್ಪ ಸರಣಿ ಶ್ರೇಷ್ಠ ಬಹುಮಾನ ಪಡೆದರು. ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ತಂಡದ ಎ. ಸಿ. ಸುಬ್ರಮಣಿ, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ತಂಡದ ಲಿಕಿತ್, ಬೆಸ್ಟ್ ಮಿಡ್ ಫೀಲ್ಡರ್‍ಪ್ರಶಸ್ತಿಯನ್ನು ಸೌತ್‍ಕೂರ್ಗ್ ಕ್ಲಬ್ ತಂಡದ ನರೆನ್ ಕಾರ್ಯಪ್ಪ, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು ಟೀಂ ಗಾರ್ಸ್ ತಂಡದ ಆಭರಣ್ ಸುದೇವ್, ಪ್ರಾಮಿಸಿಂಗ್ ಪ್ರಶಸ್ತಿಯನ್ನು ಪವಿನ್ ಪೊನ್ನಣ್ಣ ಫೌಂಡೇಷನ್ ತಂಡದ ಸಪನ್, ಮುಳಿಯ ಜ್ಯುವೆಲ್ಸ್ ಪಂದ್ಯ ಶ್ರೇಷ್ಠ ಬೆಳ್ಳಿನಾಣ್ಯ ಬಹುಮಾನವನ್ನು ಪವಿನ್ ಪೊನ್ನಣ್ಣ ಫೌಂಡೇಷನ್ ತಂಡದ ನಾಗೇಶ್ ಪಡೆದುಕೊಂಡರು. ತಾಂತ್ರಿಕ ವರ್ಗದಲ್ಲಿ ಕೊಕ್ಕಂಡ ರೋಶನ್, ಕೋಡಿಮಣಿಯಂಡ ಗಣಪತಿ, ಅರುಣ್, ಅಯ್ಯಪ್ಪ ಕಾರ್ಯನಿರ್ವಹಿಸಿದರು. ಸುಳ್ಳಿಮಾಡ ಸುಬ್ಬಯ್ಯ ವೀಕ್ಷಕ ವಿವರಣೆ ನೀಡಿದರು.(ಮೊದಲ ಪುಟದಿಂದ)

ಕೊರೊನಾ ವಾರಿಯರ್ಸ್‍ಗಳಿಗೆ ಸನ್ಮಾನ: ಸಮಾರೋಪದಲ್ಲಿ ಕೊರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ. ಮೋಹನ್, ಡಾ. ಸುರೇಶ್, ಡಾ. ಯತಿರಾಜ್, ಡಾ. ಮಹೇಶ್ ಇವರುಗಳು ಸನ್ಮಾನ ಸ್ವೀಕರಿಸಿದರು. ಟೂರ್ನಿ ಆಯೋಜನೆಗೆ ಸಹಕಾರಿ ನೀಡಿ, ಪ್ರಥಮ, ದ್ವಿತೀಯ ಟ್ರೋಫಿ ದಾನಿ ಕುಟ್ಟಂಡ ಸುದಿನ್ ಮಂದಣ್ಣ, 3 ನೇ ಸ್ಥಾನದ ಟ್ರೋಫಿ ದಾನಿ ಅಪ್ಪಚೆಟ್ಟೋಳಂಡ ಬೋಪಯ್ಯ, ಫೇರ್‍ಪ್ಲೇ ಅವಾರ್ಡ್ ದಾನಿ ಮೇಕೇರೀರ ಬೆಲ್ಲು ಕುಟ್ಟಪ್ಪ, ಶಿಸ್ತಿನ ತಂಡದ ಟ್ರೋಫಿ ದಾನಿ ಬಾಬಾ ಕನ್‍ಸ್ಟ್ರಕ್ಷನ್, ದಾನಿಗಳಾದ ಮತ್ರಂಡ ಬೋಪಣ್ಣ, ಮುಕ್ಕಾಟೀರ ನೀತು ಅಯ್ಯಪ್ಪ ಅವರನ್ನು ಅಭಿನಂದಿಸಲಾಯಿತು.

ಹಾಕಿಕೂರ್ಗ್ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ ಪ್ರಮುಖರಾದ ಬುಟ್ಟಿಯಂಡ ಚೆಂಗಪ್ಪ, ಮೂಕಚಂಡ ನಾಚಪ್ಪ, ಕುಪ್ಪಂಡ ದಿಲನ್ ಬೋಪಣ್ಣ, ಸಣ್ಣುವಂಡ ಲೋಕೇಶ್, ಪ್ರಮುಖರಾದ ಡಾ. ಶರತ್, ನೆಲ್ಲಮಕ್ಕಡ ಪವನ್ ಬಹುಮಾನ ವಿತರಣೆ ಮಾಡಿದರು.