ಮಡಿಕೇರಿ,ಡಿ.21: ಅನಾದಿ ಕಾಲದಿಂದಲೂ ಪೂಜ್ಯನೀಯ ಭಾವನೆಯಿಂದ ಸಂರಕ್ಷಿಸಿಕೊಂಡು ಬರಲಾಗಿದ್ದ ದೇವರ ಕಾಡಿನ ಒಳಗೆ ಭಾರೀ ಗಾತ್ರದ ಬೀಟೆ ಮರವನ್ನು ಕಡಿದು ಸಾಗಾಟ ಮಾಡಲು ಸಿದ್ದಗೊಳಿಸಿದ್ದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವೀರಾಜಪೇಟೆ ತಾಲೂಕಿನ ಬೀರುಗ ಗ್ರಾಮದ ದೇವರ ಕಾಡಿನ ಒಳಗೆ ಈ ಕೃತ್ಯ ನಡೆದಿದ್ದು, 5 ಲಕ್ಷ ರೂ. ಮೌಲ್ಯದ ಬೀಟೆ ಮರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಲೆ ಬೀಸಿದೆ.

ಘಟನೆ ವಿವರ

ವೀರಾಜಪೇಟೆ ತಾಲೂಕಿನ ಬೀರುಗದ ಸಂರಕ್ಷಿತ ದೇವರಕಾಡಿನ ಒಳಗೆ ಭಾರೀ ಗಾತ್ರದ ಬೀಟೆ ಮರವನ್ನು ಕಡಿದು ಸಾಗಾಟಕ್ಕೆ ಸಿದ್ದಗೊಳಿಸಿರುವ ಬಗ್ಗೆ ವೀರಾಜಪೇಟೆ ಸಿಐಡಿ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕಿ ವೀಣಾ ನಾಯಕ್ ಅವರಿಗೆ ತಾ.19ರಂದು ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ತೆರಳಿದ ತಂಡ ದಾಳಿ ನಡೆಸುವ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಭಾರೀ ಗಾತ್ರದ ಬಿದ್ದಿದ್ದ ಮರವನ್ನು ಹಲವು ತುಂಡುಗಳನ್ನಾಗಿ ಕತ್ತರಿಸಿ ಅದನ್ನು ಸಾಗಾಟ ಮಾಡಲು ಸಿದ್ದಗೊಳಿಸಿದ್ದು ಕಂಡು ಬಂದಿದೆ. ಬೀಟೆ ಮರದ ತುಂಡುಗಳು 150 ಸಿಎಫ್‍ಟಿ ಇದ್ದು, ರೂ.5 ಲಕ್ಷ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ವೀರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕಿ ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ. ಸೋಮಣ್ಣ, ಟಿ.ಪಿ. ಮಂಜುನಾಥ್, ಎಂ.ಬಿ. ಗಣೇಶ್, ಪಿ.ಬಿ. ಮೊಣ್ಣಪ್ಪ, ಎಸ್.ಎಂ. ಯೋಗೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.