ಸೋಮವಾರಪೇಟೆ, ಡಿ. 21 : ತಾಲೂಕಿನ ಗಣಗೂರು ಗ್ರಾ. ಪಂ. ವ್ಯಾಪ್ತಿಯ ಬಾಣಾವರದಲ್ಲಿ ಗುರುತಿಸಲಾಗಿರುವ ಸ್ಥಳದಲ್ಲಿ ರೂ. 1 ಕೋಟಿ ವೆಚ್ಚದ ಅಂಬೇಡ್ಕರ್ ಭವನ ನಿರ್ಮಿಸಲು ಕ್ರಿಯಾಯೋಜನೆ ತಯಾರಿಸಿದ್ದು, ತಕ್ಷಣ ಅನುದಾನ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ಚಿಂತಕರ ಬಳಗದ ಹೋಬಳಿ ಅಧ್ಯಕ್ಷ ಹೆಚ್.ಸಿ. ರಾಮಕೃಷ್ಣ ಆಗ್ರಹಿಸಿದ್ದಾರೆ. ಬಾಣಾವರ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಶಾಸಕರು ತಮ್ಮ ಪ್ರಯತ್ನದಿಂದ 40 ಸೆಂಟ್ಸ್ ನಿವೇಶನವನ್ನು ಮಂಜೂರಾತಿ ಮಾಡಿಸಿದ್ದಾರೆ. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 75 ಲಕ್ಷ ಅನುದಾನ ಒದಗಿಸುವಂತೆ ಇಲಾಖೆಯ ಆಯುಕ್ತರಿಗೆ, ಸಚಿವರಿಗೆ ಪತ್ರ ಬರೆದಿದ್ದಾರೆ. ತಕ್ಷಣ ಅನುದಾನ ಒದಗಿಸಿದರೆ ಭವನ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ರಾಮಕೃಷ್ಣ ತಿಳಿಸಿದ್ದಾರೆ. ಹೋಬಳಿ ಕೇಂದ್ರದ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಆಯುಕ್ತರಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. 75 ಲಕ್ಷ ಅನುದಾನ ಲಭಿಸಿದರೆ, ಇತರ ಮೂಲಗಳಿಂದ 25 ಲಕ್ಷ ಸಂಗ್ರಹಿಸಿ ಎರಡು ಅಂತಸ್ತಿನ ಭವನ ನಿರ್ಮಾಣ ಮಾಡಲಾಗುವದು. ಈ ಬಗ್ಗೆ ಅಧಿಕಾರಿಗಳು ಶೀಘ್ರ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.