ಕುಶಾಲನಗರ, ಡಿ. 21: ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ತಿರುಗಾಡುತ್ತಿದ್ದ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಸೋಮವಾರ ನಡೆಯಿತು. ಸೋಮವಾರದ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಬೀದಿ ನಾಯಿಗಳ ಹಾವಳಿ ವರದಿಗೆ ತಕ್ಷಣ ಸ್ಪಂದಿಸಿದ ಪಪಂ ಅಧ್ಯಕ್ಷ ಜೈವರ್ಧನ್, ಮೈಸೂರಿನ ತಂಡವೊಂದರ ಮೂಲಕ ಬೀದಿ ನಾಯಿಗಳನ್ನು ಪತ್ತೆಹಚ್ಚಿ ಹಿಡಿದು ಕ್ರಮಕೈಗೊಂಡಿದ್ದಾರೆ. ಪಟ್ಟಣದ ಮಾರುಕಟ್ಟೆ ರಸ್ತೆ, ಆದಿಶಂಕರಾಚಾರ್ಯ ಬಡಾವಣೆ ಸೇರಿದಂತೆ ವಿವಿಧೆಡೆ ಬೀದಿ ನಾಯಿಗಳ ಹಾವಳಿಯಿಂದ ನಾಗರಿಕರಿಗೆ ತೊಂದರೆ ಮತ್ತು ಅಪಾಯ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ತಕ್ಷಣ ಪಪಂ ಸಿಬ್ಬಂದಿಗಳ ಸಹಕಾರದೊಂದಿಗೆ ಬೀದಿಯಲ್ಲಿ ತಿರುಗಾಡುತ್ತಿದ್ದ ನಾಯಿಗಳನ್ನು ಹಿಡಿದು ಸ್ಥಳಾಂತರಿಸಲಾಯಿತು.