ಮಡಿಕೇರಿ, ಡಿ. 20 : ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಶ್ರದ್ಧಾಭಕ್ತಿಯಿಂದ ಸುಬ್ರಹ್ಮಣ್ಯ ಷಷ್ಠಿ ಆಚರಣೆ ನಡೆಯಿತು. ಕೊರೊನಾ ಹಿನ್ನೆಲೆ ಕೆಲವು ದೇವಾಲಯಗಳಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ರದ್ದು ಮಾಡಲಾಗಿತ್ತು, ಉಳಿದಂತೆ ಪ್ರತಿವರ್ಷದಂತೆ ಧಾರ್ಮಿಕ ಕಾರ್ಯ ನೆರವೇರಿತು. ಮಂಜಿನ ನಗರಿ ಮಡಿಕೇರಿಯಲ್ಲಿ ಇಂದು ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ ಮನೆ ಮಾಡಿತ್ತು. ನಗರದ ಮುತ್ತಪ್ಪ ದೇವಾಲಯದ ಉತ್ಸವ ಸಮಿತಿ ವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ಜರುಗಿದವು. ಪೂಜೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ದೇಗುಲದ ಸುತ್ತ ತಳಿರು-ತೋರಣ, ಹೂವಿನೊಂದಿಗೆ ಶೃಂಗರಿಸಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಭಕ್ತರು ವಿವಿಧ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ, ಪಂಚ ಕಜ್ಜಾಯ ಸೇವೆ, ಹಣ್ಣು ಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ ನಡೆಯಿತು. ವಿಶೇಷವಾಗಿ ಮುತ್ತಪ್ಪನ್ ಹಾಗೂ ಸುಬ್ರಹ್ಮಣ್ಯ ದೇವರ ಆರಾಧನೆ ನಡೆಯಿತು. ಇದೇ ಸಂದರ್ಭ ದಲ್ಲಿ ದೇವಾಲಯ ಆವರಣದಲ್ಲಿ ಹರಕೆಯಾಗಿ ನವಜೋಡಿಗಳ ಮದುವೆ ಕಾರ್ಯವು ನೆರವೇರಿತು. ಮಧ್ಯಾಹ್ನ ಭಕ್ತಾಧಿಗಳ ಅನ್ನಸಂತರ್ಪಣೆ ನಡೆಯಿತು.
ನಗರದ ಓಂಕಾರೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು ರಾತ್ರಿ ತೆಪ್ಪೋತ್ಸವ ನಡೆಯಿತು. ಕೋವಿಡ್ 19 ಇರುವ ಕಾರಣದಿಂದ ಈ ಬಾರಿ ದೇವಾಲಯದಲ್ಲಿ ಭಕ್ತರ ಸಂಖ್ಯೆ ಅತ್ಯಂತ ವಿರಳವಾಗಿತ್ತು.
ಬೈರಂಬಾಡ: ಬೈರಂಬಾಡ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಷಷ್ಠಿ ಆಚರಣೆ ನಡೆಯಿತು.
(ಮೊದಲ ಪುಟದಿಂದ) ಕೊರೊನಾ ನಿಬರ್ಂಧದ ಹಿನ್ನೆಲೆ ಭಕ್ತಾಧಿಗಳ ಸಂಖ್ಯೆ ಕ್ಷೀಣಿಸಿತ್ತು. ಅನ್ನಸಂತರ್ಪಣೆ ಇರಲಿಲ್ಲ. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕೂಡಿಗೆಯಲ್ಲಿ ರಥೋತ್ಸವ :ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಷಷ್ಟಿಯ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ಸರಳವಾಗಿ ರಥೋತ್ಸವ ನಡೆಯಿತು.
ದೇವಾಲಯದಲ್ಲಿ ಬೆಳಗ್ಗೆ ಹೋಮ ಹವನ, ದೇವರಿಗೆ ವಿಶೇಷವಾದ ಅಭಿಷೇಕ, ಪೂಜಾ ಕೈಂಕರ್ಯ ನೆರವೇರಿತು. ಬೆಳಿಗ್ಗೆ 8 ಗಂಟೆಗೆ ರಥ ಬಲಿ, ಕಳಸ ಪೂಜೆ ನಡೆದ ನಂತರ ದೇವರ ಮೂರ್ತಿಯನ್ನು ಅಲಂಕೃತ ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು.
ಹಿರಿಯ ಅರ್ಚಕರಾದ ಅನಂತಮೂರ್ತಿ, ದೇವಾಲಯದ ಪ್ರಧಾನ ಅರ್ಚಕ ನವೀನ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು. ದೇವಾಲಯ ಸಮಿತಿಯ ಅಧ್ಯಕ್ಷ, ಕೂಡಿಗೆ ಟಾಟಾ ಕಾಫಿಯ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ವಿವೇಕ ಅಯ್ಯಣ್ಣ, ಕಾರ್ಯದರ್ಶಿ ಡಿ.ಕೆ ಪೆÇನ್ನಪ್ಪ, ಸಹ ಕಾರ್ಯದರ್ಶಿ ಮಂದಣ್ಣ, ಸಮಿತಿಯ ಸದಸ್ಯರು ಇದ್ದರು.
ಕೂಡುಮಂಗಳೂರು ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತಾಧಿಗಳು ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆ ಸಲ್ಲಿಸಿದರು. ದೇವಾಲಯವು ವಿದ್ಯುತ್ ದೀಪದ ಅಲಂಕಾರದ ಜೊತೆಗೆ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.
ಕುಶಾಲನಗರ : ನಗರದ ಹೌಸಿಂಗ್ ಬೋರ್ಡ್ ಉದ್ಭವ ಸುಬ್ರಮಣ್ಯ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ಹೋಮ, ಹವನಾದಿ ವಿಶೇಷ ಕಾರ್ಯಕ್ರಮಗಳು ನಡೆಯಿತು. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಭಕ್ತಾದಿಗಳು ಬೆಳಗಿನ ಜಾವ 4 ಗಂಟೆಯಿಂದ ದೇವಾಲಯದ ಆವರಣದಲ್ಲಿರುವ ನಾಗದೇವರ ಗುಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಹಾಲಿನ ಅಭಿಷೇಕ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ದೇವಾಲಯದಲ್ಲಿ ಭಕ್ತಾದಿಗಳು ಪೂಜಾ ಪುರಸ್ಕಾರದಲ್ಲಿ ಪಾಲ್ಗೊಂಡು ಪುನೀತರಾದರು. ಕೋವಿಡ್-19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿ ಪೂಜಾ ವಿಧಿವಿಧಾನಗಳು ಮಾತ್ರ ಜರುಗಿದವು. ದೇವಾಲಯ ಸಮಿತಿ ಅಧ್ಯಕ್ಷರಾದ ಚಿಕ್ಕೇಗೌಡ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು.
ಕಣಿವೆ : ಷಷ್ಠಿ ಹಬ್ಬದ ಪೂಜೋತ್ಸವವನ್ನು ಕಣಿವೆ ಗ್ರಾಮದ ಸುತ್ತಮುತ್ತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮುಂಜಾನೆ ಮನೆಯಂಗಳವನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ನೆರೆಹೊರೆಯ ಮನೆಗಳ ಮಹಿಳೆಯರು ತರಕಾರಿ ಕಾಯಿ ಪಲ್ಯೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಬಳಿಕ ಮನೆಗಳಲ್ಲಿ ಷಷ್ಠಿಯ ಸಾಂಪ್ರದಾಯಿಕ ಅಡುಗೆಯಾದ ಕಿಚಡಿ, ಅನ್ನ, ಸಾಂಬಾರ್ ಹಾಗೂ ಸಿಹಿ ತಿನಿಸು ಮಾಡಿ ದೇವರಿಗೆ ನೈವೇದ್ಯ ಮಾಡಿದ ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಸಮೀಪದ ನಾಗದೇವತಾ ಸನ್ನಿಧಿಯನ್ನು ಭಕ್ತಾಧಿಗಳು ಸ್ವಚ್ಛಗೊಳಿಸಿ ಪೂಜಿಸಿ, ಹಾಲು ನೀರಿನಿಂದ ತಣಿ ಎರೆದರು.
ನಂಜರಾಯಪಟ್ಟಣ : ಕಾವೇರಿ ನದಿ ದಂಡೆಯ ನಂಜರಾಯಪಟ್ಟಣ ಗ್ರಾಮದಲ್ಲಿ ಸುಬ್ರಮಣ್ಯ ಷಷ್ಠಿ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಗ್ರಾಮದ ಭಕ್ತ ಜನರು ಹಾಗೂ ಮಹಿಳೆಯರು ತಮ್ಮ ತೋಟ ಹಾಗೂ ಮನೆಗಳ ಸನಿಹದಲ್ಲಿನ ಹುತ್ತಗಳನ್ನು ಸ್ವಚ್ಛಗೊಳಿಸಿ ಪೂಜಿಸಿ ಹಾಲೆರೆದರು.
ಸೋಮವಾರಪೇಟೆ : ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ನಾಗದೇವರಿಗೆ ವಿಶೇಷವಾಗಿ ಪೂಜೆ ನೆರವೇರಿಸಲಾಯಿತು. ಬೆಳಿಗ್ಗೆಯೇ ದೇವಾಲಯಗಳಿಗೆ ತೆರಳಿದ ಭಕ್ತಾದಿಗಳು ನಾಗರ ಮೂರ್ತಿಗೆ ವಿವಿಧ ಅಭಿಷೇಕಗಳನ್ನು ಮಾಡಿ, ಅಲಂಕಾರ ಪೂಜೆ ಸಹಿತ ವಿಶೇಷ ಷಷ್ಠಿ ಅಂಗವಾಗಿ ವಿಶೇಷ ಪೂಜೆ-ಪ್ರಾರ್ಥನೆ ನೆರವೇರಿಸಿದರು.
ನವನಾಗನಾಥ ಸನ್ನಿಧಿ : ತಾಲೂಕಿನ ಅರಸಿನಗುಪ್ಪೆ-ಸಿದ್ಧಲಿಂಗಪುರದಲ್ಲಿರುವ ಶ್ರೀಮಂಜುನಾಥ ಮತ್ತು ನವನಾಗನಾಥ ಸನ್ನಿಧಿಯಲ್ಲಿ ಷಷ್ಠಿ ಅಂಗವಾಗಿ ವಿಶೇಷ ಪೂಜೆ ನೆರವೇರಿತು. ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀ ರಾಜೇಶ್ನಾಥ್ಜೀ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಮತ್ತು ತಂಡದಿಂದ ನವನಾಗನಾಥ ದೇವರಿಗೆ ಹಾಲು, ಅರಶಿಣ, ಎಳನೀರು ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನೆರವೇರಿತು.
ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಬೆಳಗ್ಗೆ ಗಣಪತಿ ಹೋಮ ಸಹಿತ ಇತರ ಪೂಜಾ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರದಲ್ಲಿ ಕಳೆದ ತಾ. 16ರಿಂದ ಧನುರ್ಮಾಸದ ಅಂಗವಾಗಿ ಪ್ರತಿ ದಿನ ಬೆಳಿಗ್ಗೆ 4 ಗಂಟೆಯಿಂದ 5.30ರವರೆಗೆ ಧನುಪೂಜೆ ನಡೆಯುತ್ತಿದ್ದು, ಮುಂದಿನ ಒಂದು ತಿಂಗಳ ಕಾಲ ಪ್ರತಿದಿನ ಗಣಪತಿ ಹೋಮ, ಧನುರ್ಮಾಸದ ಪೂಜೆ ನೆರವೇರಲಿದೆ ಎಂದು ಗುರುಗಳಾದ ಶ್ರೀರಾಜೇಶ್ನಾಥ್ಜೀ ಹೇಳಿದರು.
ಸೋಮೇಶ್ವರ ದೇವಾಲಯ : ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ಮಹಿಳೆಯರು ದೇವಾಲಯದ ಆವರಣದಲ್ಲಿರುವ ನಾಗಪ್ರತಿಮೆಗಳಿಗೆ ಹಾಲನ್ನೆರೆದು ಪ್ರಾರ್ಥಿಸಿದರು.
ಅಯ್ಯಪ್ಪ ದೇವಾಲಯ : ಇಲ್ಲಿನ ಕಕ್ಕೆಹೊಳೆ ಜಂಕ್ಷನ್ನಲ್ಲಿರುವ ಶ್ರೀ ಮುತ್ತಪ್ಪ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿರುವ ನಾಗದೇವತೆ ಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ಪೌರೋಹಿತ್ಯದಲ್ಲಿ ವಿವಿಧ ಅಭಿಷೇಕ, ಸಂಕಲ್ಪ, ಪ್ರಾರ್ಥನೆಗಳು ನಡೆದವು. ಇದರೊಂದಿಗೆ ಕಟ್ಟೆಬಸವೇಶ್ವರ ದೇವಾಲಯ ಬಳಿಯ ಅರಳೀಕಟ್ಟೆ, ಹಳ್ಳದಿಣ್ಣೆ ಮುನೇಶ್ವರ ದೇವಾಲಯ, ಆನೆಕೆರೆ ಬಳಿಯಿರುವ ನಾಗಬನ, ಚಂದನಮಕ್ಕಿ ನಾಗಬನ, ಯಡೂರು ಸೋಮೇಶ್ವರ ದೇವಾಲಯ ಸೇರಿದಂತೆ ಇತರೆಡೆಗಳಲ್ಲೂ ದಿನದ ಅಂಗವಾಗಿ ಪೂಜೆಗಳು ನಡೆದವು.
ಷಷ್ಠಿ ಅಂಗವಾಗಿ ಮನೆಗಳನ್ನು ಶುದ್ಧಗೊಳಿಸಿ, ಹೆಂಗಳೆಯರು ವಿವಿಧ ಬಗೆಯ ತರಕಾರಿಗಳನ್ನು ನೆರೆಮನೆಗಳಿಗೆ ಹಂಚಿದರು. ಬಗೆ ಬಗೆಯ ತರಕಾರಿಗಳಿಂದ ಮಾಡಿದ ಅಡುಗೆಯನ್ನು ತಯಾರಿಸಿ, ಹಬ್ಬದ ಊಟ ಸವಿದರು.
ನಾಪೆÉÇೀಕ್ಲು: ಗ್ರಾಮದ ಕಕ್ಕುಂದ ಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಲಯದಲ್ಲಿ ಸುಬ್ರಮಣ್ಯ ಷಷ್ಠಿ ಹಬ್ಬದ ಪ್ರಯುಕ್ತ ಆಶ್ಲೇಷ ಬಲಿ, ಮಹಾಪೂಜೆ ಮತ್ತು ಇತರ ಧಾರ್ಮಿಕ ವಿಧಿ ವಿಧಾನಗಳಿಂದ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬಳಿಕ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನ್ನಸಂತರ್ಪಣೆ ನೆರವೇರಿತು.
ಕೋವಿಡ್ ಹಿನ್ನೆಲೆಯಲ್ಲಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಪ್ರಧಾನ ಅರ್ಚಕ ಸುಧೀರ ಕೇಕುಣ್ಣಾಯ ಪೂಜಾ ಕೈಂಕರ್ಯ ನೆರವೇರಿಸಿ ಉತ್ಸವ ಸಂಪನ್ನಗೊಂಡಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಂಜಯ್ಯ, ಕಾರ್ಯದರ್ಶಿ ಸುಜಿ, ಖಜಾಂಚಿ ಗೋಪಾಲ, ಪ್ರಮುಖರಾದ ಟಿ.ವಿ.ಶ್ರೀನಿವಾಸ್, ಆನಂದಸ್ವಾಮಿ, ಗ್ರಾಮ ಪಂಚಾಯತ್ ಮಾಜಿ ಸದಸೆÀ್ಯ ಸುಶೀಲಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಪೆÇನ್ನಂಪೇಟೆ : ಇಲ್ಲಿನ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಆಚರಿಸಲಾಯಿತು. ನೂರಾರು ಭಕ್ತರು ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾಮೂಹಿಕ ಅನ್ನಸಂತರ್ಪಣೆಯನ್ನು ರದ್ದು ಪಡಿಸಲಾಗಿತ್ತು. ಕುಂದ ರಸ್ತೆಯಲ್ಲಿರುವ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಭಕ್ತರು ನಾಗದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬಸವೇಶ್ವರ ದೇವಸ್ಥಾನದಲ್ಲಿಯೂ ಷಷ್ಠಿ ಆಚರಿಸಲಾಯಿತು.
ವೀರಾಜಪೇಟೆ : ವೀರಾಜಪೇಟೆಯ ತೆಲುಗರಬೀದಿಯಲ್ಲಿರುವ ಮಾರಿಯಮ್ಮ ದೇವಾಲಯದಲ್ಲಿ ಸುಬ್ರಮಣಿ ಷಷ್ಠಿ ಉತ್ಸವವನ್ನು ಆಚರಿಸಲಾಯಿತು. ಷಷ್ಠಿ ಪ್ರಯುಕ್ತ ಇಂದು ಬೆಳಗಿನಿಂದಲೇ ಮುತ್ತೈದೆಯರು ಮಾರಿಯಮ್ಮ ದೇವಾಲಯಕ್ಕೆ ತೆರಳಿ ನಾಗ ದೇವತೆಯ ಪ್ರತಿಷ್ಠಾಪನೆಯ ಗರ್ಭಗುಡಿಯಲ್ಲಿರುವ ನಾಗದೇವತೆಗೆ ಹಾಲು ಸಮರ್ಪಿಸಿ ಪೂಜೆ ಸಲ್ಲಿಸಿದರು. ಕೋವಿಡ್-19 ಹಿನ್ನೆಲೆಯಲ್ಲಿ ದೇವಾಲ ಯದಲ್ಲಿ ನಾಗದೇವತೆ ಗರ್ಭಗುಡಿಯಲ್ಲಿ ಪೂಜೆಗೆ ಮಾತ್ರ ಅವಕಾಶವಿತ್ತು. ಕೋವಿಡ್-19 ಷರತ್ತುಗೊಳಪಟ್ಟು ಅನ್ನಸಂತರ್ಪಣೆಗೆ ಅವಕಾಶವಿರಲಿಲ್ಲ. ಭಕ್ತಾಧಿಗಳು ನಾಗದೇವತೆಗೆ ಪೂಜೆ ಸಲ್ಲಿಸಿದ ನಂತರ ಮಾರಿಯಮ್ಮನಿಗೂ ಪೂಜೆ ಸಲ್ಲಿಸಿದರು. ವೀರಾಜಪೇಟೆಯ ಮೀನುಪೇಟೆಯಲ್ಲಿರುವ ಕಂಚಿ ಕಾಮಾಕ್ಷಿ ದೇವಾಲಯದಲ್ಲಿಯೂ ಷಷ್ಠಿ ಉತ್ಸವವನ್ನು ಆಚರಿಸಲಾಯಿತು.
ಸುಂಟಿಕೊಪ್ಪ : ಇಲ್ಲಿನ ಪನ್ಯ ಗ್ರಾಮದ ಬೆಳ್ಳಾರಿಕಮ್ಮ ದೇವಾಲಯದಲ್ಲಿ ಸುಬಹ್ಮಣ್ಯ ಷಷ್ಠಿ ಪ್ರಯುಕ್ತ ನಾಗ ಹಾಗೂ ಬೆಳ್ಳಾರಿಕಮ್ಮ ದೇವರಿಗೆ ವಿಶೇಷ ಪೂಜೆ ನೆÀರವೇರಿತು.
ದೇವಾಲಯವನ್ನು ಅಲಂಕಾರಗೊಳಿಸುವ ಮೂಲಕ ಮುಂಜಾನೆಯಿಂದ ವಿವಿಧ ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಉಡುಪ ನಡೆಸಿದರು. ನಾಗದೇವರಿಗೆ ಕ್ಷೀರಾಭಿಷೇಕ, ನಾಗಾಲಂಕಾರ ನೆÀರವೇರಿದ ನಂತರ ಮಹಾ ಮಂಗಳಾರತಿ, ಅನ್ನದಾನ ನಡೆಸಲಾಯಿತು. ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿ ಅಧ್ಯಕ್ಷ ಪಿ.ಕೆ.ಅನಿಲ್, ಕಾರ್ಯದರ್ಶಿ ಮಾಗಿಲು ವಸಂತ ಸರ್ವ ಸದಸ್ಯರು ಹಾಜರಿದ್ದರು.
ನಾಪೋಕ್ಲು : ಸಮೀಪದ ಬಲ್ಲಮಾವಟಿ ಶ್ರೀ ಭಗವತಿ ದೇವಳದಲ್ಲಿ ಷಷ್ಠಿ ಹಬ್ಬದ ಪ್ರಯುಕ್ತ ನಾಗಪೂಜೆ ನೆರವೇರಿಸಲಾಯಿತು.
ಶನಿವಾರಸಂತೆ : ಪಟ್ಟಣದ ಜನತೆ ಸುಬ್ರಹ್ಮಣ್ಯ ಷಷ್ಠಿಯನ್ನು ನಾಗದೇವತೆಯನ್ನು ಆರಾಧಿಸಿ, ತನಿ ಎರೆದು, ಮಧ್ಯಾಹ್ನದ ತನಕ ಉಪವಾಸವಿದ್ದು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪೂಜೆ ನಡೆದ ಬಳಿಕ ಮಕ್ಕಳು, ಮಹಿಳೆಯರು ವಿಧವಿಧ ತರಕಾರಿಗಳನ್ನು ಅಕ್ಕಪಕ್ಕದ ಮನೆಯವರಿಗೆ, ಬಂಧುಗಳಿಗೆ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಹಂಚಿಕೆಯಾದ ತರಕಾರಿಗಳನ್ನು ಅಡುಗೆಯಲ್ಲಿ ಬಳಸಿ ಬೋಜನ ಸವಿದರು. ಹಬ್ಬದ ಪ್ರಯುಕ್ತ ಗಣಪತಿ, ಚಂದ್ರಮೌಳೇಶ್ವರ, ಪಾರ್ವತಿ ದೇವಾಲಯ, ಶ್ರೀರಾಮ ಮಂದಿರ ಹಾಗೂ ಆದರ್ಶ ವಿಜಯ ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.