ಲಾಕ್‍ಡೌನ್ ಮಾಡುವ ಪರಿಸ್ಥಿತಿ ಇಲ್ಲ

ಬೆಂಗಳೂರು, ಡಿ. 21: ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ನಿರ್ಧಾರ ಇಲ್ಲ ಎಂದು ಹೇಳಿದರು. ವಿದೇಶದಿಂದ ಬಂದ ಎಲ್ಲರಿಗೂ ಐಸೋಲೇಶನ್ ಇಲ್ಲ. ಆದರೆ ಇಂಗ್ಲೆಂಡ್, ಡೆನ್ಮಾರ್ಕ್, ನೆದರ್ ಲ್ಯಾಂಡ್ಸ್‍ನಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಪತ್ತೆಯಾಗಿದೆ. ಹೊಸ ವಂಶವಾಹಿಯ ವೈರಾಣು ಕಾಣಿಸಿಕೊಂಡಿವೆ. ಈಗ ಇರುವ ವೈರಸ್‍ಗಿಂತಲೂ ಹೊಸ ವೈರಸ್‍ನಿಂದ ಸೋಂಕು ಹರಡುವ ಪ್ರಮಾಣ ಹೆಚ್ಚಿದೆ. ಈ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದೆ ಎಂದರು. ನಿನ್ನೆ ರಾಜ್ಯಕ್ಕೆ 291 ಜನರು ಬ್ರಿಟಿಷ್ ಏರ್ ವೇಸ್‍ನಿಂದ ಬಂದಿದ್ದರು. 246 ಜನರು ಏರ್ ಇಂಡಿಯಾದಿಂದ ಬಂದಿದ್ದರು. ಈ ಪೈಕಿ 138 ಜನರು ನೆಗೆಟಿವ್ ವರದಿ ತಂದಿಲ್ಲ. ಇಂತಹವರನ್ನು ಒಂದು ವಾರ ಕಾಲ ಮನೆಯಲ್ಲೇ ನಿಗಾ ಇರಿಸಲಾಗುತ್ತದೆ. ನಾಳೆಯಿಂದ ವಿಮಾನ ನಿಲ್ದಾಣಗಳಲ್ಲಿ ಕಿಯೋಸ್ಕ್ ಇಟ್ಟು, ಅಲ್ಲಿ ತಪಾಸಣೆ ಮಾಡಲಾಗುವುದು ಎಂದು ಅವರು ಹೇಳಿದರು. ಈ ವೈರಾಣು ಹರಡುವ ವೇಗ ಹೆಚ್ಚಿದೆ. ಆದರೆ ರೋಗ ತೀವ್ರವಾಗಿರುವುದಿಲ್ಲ. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಿದೆ. ಹೊಸ ವರ್ಷದ ಅದ್ಧೂರಿ ಆಚರಣೆಗಳನ್ನು ಕೈಬಿಡಬೇಕಿದೆ. ಕೆಲ ಹೊಟೇಲ್‍ಗಳಲ್ಲಿ ಬುಕಿಂಗ್ ಮಾಡಿ ಆಚರಣೆ ಮಾಡಲು ಸಿದ್ಧತೆ ನಡೆಸಿರುವುದು ಕಂಡುಬಂದಿದೆ. ಹೀಗೆ ಮಾಡಿದರೆ ಕ್ರಮಕೈಗೊಳ್ಳಬೇಕಾಗುತ್ತದೆ. ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವಾಗಿದ್ದು, ಹೊಸ ಬಗೆಯ ವೈರಾಣು ಬರುವ ಸಂದರ್ಭದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದರು. ಕಳೆದ 14 ದಿನಗಳಲ್ಲಿ ಬೇರೆ ದೇಶಗಳಿಂದ ರಾಜ್ಯಕ್ಕೆ ಬಂದವರು ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ಯುನೈಟೆಡ್ ಕಿಂಗ್ ಡಮ್‍ನಿಂದ ಬಂದವರು ಹಾಗೂ ಬೇರೆ ದೇಶಗಳಿಂದ ಬಂದವರಿಗೂ 7 ದಿನಗಳ ಕ್ವಾರಂಟೈನ್‍ಗೆ ಒಳಪಡಿಸಬೇಕು ಎಂದು ನಿರ್ಧರಿಸಲಾಗಿದೆ. ಯುಕೆಯಿಂದ ಬಂದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ ಎಂದು

ಭಾರತದಲ್ಲಿ ಬ್ರಿಟನ್ ವಿಮಾನಗಳ ನಿಷೇಧ

ನವದೆಹಲಿ, ಡಿ. 21: ಬ್ರಿಟನ್‍ನಲ್ಲಿ ರೂಪಾಂತರಗೊಂಡ ಮಹಾಮಾರಿ ಕೊರೊನಾ ವೈರಸ್‍ನ ಹೊಸ ಪ್ರಭೇದ ಪತ್ತೆಯಾಗಿದ್ದು, ಹಲವು ದೇಶಗಳಲ್ಲಿ ಬ್ರಿಟನ್‍ನಿಂದ ಬರುವ ಮತ್ತು ಹೋಗುವ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗ ಭಾರತ ಸಹ ಬ್ರಿಟನ್‍ನ ಎಲ್ಲಾ ವಿಮಾನಗಳನ್ನು ನಿಷೇಧಿಸಿದೆ. ಬ್ರಿಟನ್‍ನಲ್ಲಿ ಚಾಲ್ತಿಯಲ್ಲಿರುವ ಕೊರೊನಾ ಪರಿಸ್ಥಿತಿಯನ್ನು ಪರಿಗಣಿಸಿ ಯುಕೆಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು 2020 ತಾ. 31ರವರೆಗೆ ಸ್ಥಗಿತಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿಮಾನಯಾನ ಸಚಿವಾಲಯ ಸೋಮವಾರ ಟ್ವೀಟ್ ಮಾಡಿದೆ.

ರೈತರು ನ್ಯಾಯಾಲಯಕ್ಕೆ ಹೋಗಲಿ

ಬೆಂಗಳೂರು, ಡಿ. 21: ಯಾವುದೇ ತರಹದ ವಿವಾದಗಳನ್ನು ಬಗೆಹರಿಸಲು ರೈತರಿಗೆ ನ್ಯಾಯಾಲಯಕ್ಕೆ ಹೋಗುವ ಅವಕಾಶ ಇರಲಿದೆ. ರಾಜ್ಯಗಳಿಗೆ ಕೃಷಿ ಒಪ್ಪಂದಗಳನ್ನು ನೋಂದಣಿ ಮಾಡಿಕೊಳ್ಳುವ ಅಧಿಕಾರವಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದರಿಂದ, ಗ್ರಾಹಕ ಮತ್ತು ರೈತರಿಬ್ಬರೂ ಕಾನೂನಿನ ಚೌಕಟ್ಟಿನೊಳಗೇ ವ್ಯವಹರಿಸುವುದು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅನೇಕ ರಾಜ್ಯಗಳು ಈಗಾಗಲೇ ಗುತ್ತಿಗೆ ಕೃಷಿಯನ್ನು ಅನುಮೋದಿಸಿವೆ. ಅನೇಕ ರಾಜ್ಯಗಳು ಕಾಂಟ್ರಾಕ್ಟ್ ಫಾರ್ಮಿಂಗ್ ಕಾನೂನುಗಳನ್ನು ಸಹ ಹೊಂದಿದ್ದು, ಕೇಂದ್ರ ಸರಕಾರದ ವತಿಯಿಂದ ಸ್ಥೂಲವಾಗಿ ಗುತ್ತಿಗೆ ಕೃಷಿ ಮತ್ತು ಕಾನೂನುಗಳನ್ನು ಅಧ್ಯಯನ ಮಾಡಿಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪಕ್ಷಾಂತರಿ ಪತ್ನಿಗೆ ಡೈವೋರ್ಸ್ !

ಕೋಲ್ಕತ್ತಾ, ಡಿ. 21: ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಂತೆ ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತಾ ಅವರು ಮಮತಾ ಬ್ಯಾನರ್ಜಿ ನಾಯಕತ್ವ ಒಪ್ಪಿ, ಟಿಎಂಪಿ ಸೇರಿದ್ದಾರೆ. ಪತ್ನಿಯ ಪಕ್ಷಾಂತರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪತಿ ಸೌಮಿತ್ರ ಖಾನ್ ಅವರು, ಡೈವೋರ್ಸ್ ನೋಟಿಸ್ ನೀಡುವುದಾಗಿ ಹೇಳಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಷ್ಣುಪುರ ಲೋಕಸಭಾ ಕ್ಷೇತ್ರದಲ್ಲಿ ತನ್ನ ಗಂಡನ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದರೂ ಬಿಜೆಪಿಯಲ್ಲಿ ತನಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಪತ್ನಿಯ ಆರೋಪವನ್ನು ಸೌಮಿತ್ರ ಖಾನ್ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಆಕೆಯ ನಿರ್ಧಾರದಿಂದ ನನಗೆ ಆಘಾತವಾಗಿದೆ. ಸುಜಾತಾರಿಂದ ವಿಚ್ಛೇದನ ಪಡೆಯಲು ನೋಟಿಸ್ ಕಳುಹಿಸುವುದಾಗಿ ತಿಳಿಸಿದ್ದಾರೆ.

ನಟ ರಜನಿಕಾಂತ್‍ಗೆ ಸಮನ್ಸ್ ಜಾರಿ

ತುತುಕೂಡಿ, ಡಿ. 21: ಕಳೆದ ಎರಡು ವರ್ಷಗಳ ಹಿಂದೆ ನಡೆದಿದ್ದ ತುತುಕೂಡಿ ಪೆÇಲೀಸ್ ಫೈರಿಂಗ್ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿರುವ ಏಕ ವ್ಯಕ್ತಿ ಆಯೋಗವು, ಬರುವ ಜ. 19 ರಂದು ವಿಚಾರಣೆಗೆ ಹಾಜರಾಗುವಂತೆ ಸೂಪರ್‍ಸ್ಟಾರ್ ರಜನಿಕಾಂತ್ ಅವರಿಗೆ ಸಮನ್ಸ್ ನೀಡಿದೆ. ವಿಚಾರಣೆಗಾಗಿ ಎರಡನೇ ಬಾರಿಗೆ ರಜನಿಕಾಂತ್ ಅವರಿಗೆ ಆಯೋಗ ಸಮನ್ಸ್ ನೀಡಿದೆ. 2018ರ ಮೇ ತಿಂಗಳಲ್ಲಿ ರಜನಿಕಾಂತ್ ಸಂತ್ರಸ್ತರನ್ನು ಭೇಟಿ ಮಾಡಲು ಬಂದಾಗ ಸ್ಟರ್ಲೈಟ್ ವಿರೋಧಿ ಪ್ರತಿಭಟನಾಕಾರರ ಮೇಲೆ ಪೆÇಲೀಸರು ಗುಂಡು ಹಾರಿಸಿದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನೆಯೊಳಗೆ ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಶನ್ ನೇತೃತ್ವದ ಆಯೋಗ, ರಜನಿಕಾಂತ್‍ಗೆ ಸಮನ್ಸ್ ನೀಡಿತ್ತು. ಆದರೆ, ತುತುಕೂಡಿಗೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಲಿದೆ ಎಂದು ಹೇಳುವ ಮೂಲಕ ರಜನಿಕಾಂತ್ ವಿನಾಯಿತಿ ಬಯಸಿದ್ದರು. ಆದಾಗ್ಯೂ, ಬರುವ ವರ್ಷದ ಜನವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ ಆಯೋಗ ಸಮನ್ಸ್ ನೀಡಿದೆ. 24ನೇ ಹಂತದ ವಿಚಾರಣೆಯನ್ನು 2021ರ ಜನವರಿ 18 ರಿಂದ 22ರವರೆಗೆ ನಿಗದಿಪಡಿಸಲಾಗಿದೆ.