ಗೋಣಿಕೊಪ್ಪಲು, ಡಿ. 20: ಕಾಡಾನೆ ದಾಳಿಗೆ ಕಾರ್ಮಿಕ ರಾಮ (52) ಆಲಿಯಾಸ್ ಭಂಗಿರಾಮ ಎಂಬಾತ ಸಿಲುಕಿದ ಪರಿಣಾಮ ಆತನ ಎಡಗಾಲು ತುಂಡಾಗಿದ್ದು ಪ್ರಾಣಪಾಯ ದಿಂದ ಪಾರಾಗಿದ್ದಾನೆ.
ತಿತಿಮತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಷ್ಮೆ ಹಡ್ಲುವಿನ ನಿವಾಸಿ ಯಾಗಿರುವ ರಾಮ ಭಾನುವಾರ ಸಂಜೆ 4-30 ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭ ಅರಣ್ಯದಿಂದ ಬಂದ ಕಾಡಾನೆ ರಾಮನ ಮೇಲೆ ದಾಳಿ ನಡೆಸಿದೆ.
ಈ ಸಂದರ್ಭ ರಾಮ ಬೊಬ್ಬೆ ಹಾಕಿ ಆನೆಯನ್ನು ಓಡಿಸುವ ಪ್ರಯತ್ನ ಮಾಡಿದ್ದಾನೆ. ಗಾಬರಿಗೊಂಡ ಕಾಡಾನೆ ಯು ಆತನ ಕಾಲಿಗೆ ತುಳಿದು ತೆರಳಿದೆ.
ಇದರಿಂದ ಕಾಲು ಮುರಿತ ಕ್ಕೊಳಗಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ಜನತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಆತನನ್ನು ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಅರಣ್ಯ ಸಿಬ್ಬಂದಿಗಳು ದಾಖಲಿಸಿದ್ದಾರೆ. ಎಸಿಎಫ್ ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.
-ಹೆಚ್.ಕೆ. ಜಗದೀಶ್