ಕುಶಾಲನಗರ, ಡಿ. 20 : ಗೋಮಾಂಸ ಭಕ್ಷಣೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಗೆ ಕುಶಾಲನಗರ ಕೊಡವ ಸಮಾಜದ ವತಿಯಿಂದ ಪ್ರತಿಭಟನೆ ನಡೆಯಿತು. ಅಧ್ಯಕ್ಷರಾದ ಮಂಡೆಪಂಡ ಬೋಸ್ ಮೊಣ್ಣಪ್ಪ ನೇತೃತ್ವದಲ್ಲಿ ಕುಶಾಲನಗರದ ಫೀಲ್ಡ್ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸಮಾಜದ ಆಡಳಿತ ಮಂಡಳಿ ಪ್ರಮುಖರು ಭಾನುವಾರ ಸಂಜೆ ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕೊಡವ ಸಂಸ್ಕøತಿ ಬಗ್ಗೆ ಅರಿವಿಲ್ಲದ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಸಿದ್ದರಾಮಯ್ಯ ಕೊಡವರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಕೊಡವ ಸಮುದಾಯ ಗೋವುಗಳನ್ನು ಪೂಜಿಸುವ ಸಮುದಾಯವೇ ಹೊರತು ಗೋಮಾಂಸ ಭಕ್ಷಕರಲ್ಲ ಎಂಬುವುದನ್ನು ಸಿದ್ದರಾಮಯ್ಯ ತಿಳಿಯಲಿ ಎಂದರು. ಕಾಫಿ ಬೆಳೆಗಾರ ಚೇಂದಂಡ ಜೆಮ್ಸಿ ಪೊನ್ನಪ್ಪ ಅವರು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸಿ ಇಂತಹ ಬಾಲಿಶ ಹೇಳಿಕೆ ನೀಡುವುದು ಮಾಜಿ ಮುಖ್ಯಮಂತ್ರಿಗಳಿಗೆ ತರವಲ್ಲ ಎಂದರು.
ಪ್ರಮುಖರಾದ ಪುಲಿಯಂಡ ಚಂಗಪ್ಪ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಕಾರ್ಯದರ್ಶಿ ಐಲಪಂಡ ಸಂಜು, ಮಾದಪಂಡ ಸತೀಶ್, ಪಲಂಗೆಟಿ ಟಿಟ್ಟಿ, ಬೊಪ್ಪಂಡ ಕನಿಕೆ, ಹಂಚ್ಚೆಟಿರ ವಾಣಿ, ಬೊಪ್ಪಂಡ ನಂದ, ಚೋರೀರ ತಿಮ್ಮಯ್ಯ ಮತ್ತಿತರ ಪ್ರಮುಖರು ಇದ್ದರು.