ಗೋಣಿಕೊಪ್ಪ ವರದಿ, ಡಿ. 20: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ, ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್‍ನಲ್ಲಿ ಸೋಮವಾರ ಪ್ರಗತಿ ಸ್ಪೋಟ್ರ್ಸ್ ಅಕಾಡೆಮಿ ಹಾಗೂ ಪವಿನ್ ಪೊನ್ನಣ್ಣ ತಂಡಗಳು ಸೆಣೆಸಾಟ ನಡೆಸಲಿವೆ.
ಭಾನುವಾರ ನಡೆದ ಸೆಮಿ ಫೈನಲ್‍ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡ ಗೆದ್ದು 2 ನೇ ತಂಡವಾಗಿ ಫೈನಲ್‍ಗೆ ಪ್ರವೇಶ ಪಡೆಯಿತು. ರೋಚಕ ಆಟದ ನಡುವೆಯೂ ಟೀಂ ಗಾರ್ಸ್ ತಂಡ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿತ್ತು.
ಪವಿನ್ ಪೊನ್ನಣ್ಣ ಫೌಂಡೇಷನ್ ಶೂಟೌಟ್‍ನಲ್ಲಿ ಟೀಂ ಗಾರ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು.
ನಿಗದಿತ ಸಮಯದ 35 ನೇ ನಿಮಿಷದಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡದ ಆಟಗಾರ ಐಚಂಡ ಪಳಂಗಪ್ಪ, 21 ನೇ ನಿಮಿಷದಲ್ಲಿ ಟೀಂ ಗಾರ್ಸ್ ತಂಡದ ತ್ರಿಷುಲ್ ಗಣಪತಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಸಮಬಲ ತಂದುಕೊಟ್ಟರು. ಪರಿಣಾಮ 1-1 ಗೋಲುಗಳ ಟೈ ಸಾಧನೆ ಮಾಡಿದವು. ಶೂಟೌಟ್‍ನಲ್ಲಿ ಪವಿನ್ ಪೊನ್ನಣ್ಣ ತಂಡದ ಆಟಗಾರರಾದ ಐಚಂಡ ಪಳಂಗಪ್ಪ, ಕೆ. ಸಿ. ಬೋಪಣ್ಣ, ನಾಗೇಶ್ ಗೋಲು ಹೊಡೆದು ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ದರು. ಗಾರ್ಸ್ ತಂಡಕ್ಕೆ ಆಭರಣ್ ಸುದೇವ್ ಏಕೈಕ ಗೋಲು ಹೊಡೆದರಾದರೂ ಸೋಲಿನಿಂದ ಪಾರಾಗಲು ಆಗಲಿಲ್ಲ.
ಮುಳಿಯ ಜ್ಯುವೆಲ್ಸ್ ಪಂದ್ಯ ಶ್ರೇಷ್ಠ ಬೆಳ್ಳಿನಾಣ್ಯ ಬಹುಮಾನವನ್ನು ಗಾರ್ಸ್ ತಂಡದ ಚೇತನ್ ಪಡೆದುಕೊಂಡರು. ತಾಂತ್ರಿಕ ವರ್ಗದಲ್ಲಿ ನೆಲ್ಲಮಕ್ಕಡ ಪವನ್, ಕೊಂಡೀರ ಕೀರ್ತಿ, ಕುಪ್ಪಂಡ ದಿಲನ್, ಅಯ್ಯಪ್ಪ ಕಾರ್ಯನಿರ್ವಹಿಸಿದರು. ಸುಳ್ಳಿಮಾಡ ಸುಬ್ಬಯ್ಯ ವೀಕ್ಷಕ ವಿವರಣೆ ನೀಡಿದರು.
ಸಮಾರೋಪ ; ಸೋಮವಾರ ಅಂತಿಮ ಪಂದ್ಯದ ನಂತರ ನಡೆಯುವ ಸಮಾರೋಪದಲ್ಲಿ ಕೊರೊನಾ ಸೇನಾನಿಗಳನ್ನು ಸನ್ಮಾನಿಸಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ. ಮೋಹನ್, ಡಾ. ಗೋಪಿನಾಥ್, ಡಾ. ಆನಂದ್, ಡಾ. ಯತಿರಾಜ್, ಡಾ. ಮಹೇಶ್, ಪುಲಿಯಂಡ ರಾಜೇಶ್, ಅಮ್ಮೇಕಂಡ ಎ. ಗಣಪತಿ ಇವರುಗಳನ್ನು ಸನ್ಮಾನಿಸಲಾಗುತ್ತದೆ.
ಈ ಸಂದರ್ಭ ಹಾಕಿಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ, ಉದ್ಯಮಿ ಕುಟ್ಟಂಡ ಸುದಿನ್ ಮಂದಣ್ಣ, ಕೂರ್ಗ್ ಹಾಕಿ ಪ್ರೀಮಿಯರ್ ಲೀಗ್ ಕಮಿಟಿ ಪ್ರಮುಖರಾದ ಬುಟ್ಟಿಯಂಡ ಚೆಂಗಪ್ಪ, ಮೂಕಚಂಡ ನಾಚಪ್ಪ, ಕುಪ್ಪಂಡ ದಿಲನ್ ಬೋಪಣ್ಣ, ಸಣ್ಣುವಂಡ ಲೋಕೇಶ್ ಉಪಸ್ಥಿತಲಿರಲಿದ್ದಾರೆ.