ಕೂಡಿಗೆ, ಡಿ. 20: ಕಾರ್ಮಿಕರು ಸಂಘಟಿತರಾಗಿ ಸದಸ್ಯತ್ವ ಹೊಂದುವ ಮೂಲಕ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಕುಶಾಲನಗರದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಆರ್. ಮುರುಗೇಶ್ ಸಲಹೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರು, ಯೋಧರಂತೆ ಕಾರ್ಮಿಕರು ಕೂಡ ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೋಂದಾಯಿತ ಸದಸ್ಯರಿಗೆ ಕಾರ್ಮಿಕ ಇಲಾಖೆಯಿಂದ ಹಲವು ಸವಲತ್ತುಗಳು ಲಭಿಸುತ್ತಿವೆ. ಆದರೆ ಕೆಲವು ಕಾರ್ಮಿಕರ ನಿರ್ಲಕ್ಷ್ಯ ಮನೋಭಾವದಿಂದ ಸದಸ್ಯತ್ವ ಹೊಂದದೆ ಅವಘಡಗಳು ಉಂಟಾದ ಸಂದರ್ಭ ಯಾವುದೇ ನೆರವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ಮುಂದೆಯಾದರೂ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಸ್ಥಳೀಯ ಕಾರ್ಮಿಕ ಸಂಘಗಳಲ್ಲಿ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸಂಘಟಿತರಾಗಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.