ಸೋಮವಾರಪೇಟೆ, ಡಿ. 19: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚುನಾವಣಾಧಿಕಾರಿಗಳ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವದೇ ಮತದಾರರಿಗೆ ತಮ್ಮ ಮತದಾನ ಮಾಡಲು ತೊಂದರೆಯಾಗಬಾರದು. ಮುಕ್ತ ಮತದಾನಕ್ಕೆ ಎಲ್ಲ ಚುನಾವಣಾಧಿಕಾರಿಗಳು ವ್ಯವಸ್ಥೆ ರೂಪಿಸಬೇಕು ಎಂದು ಸೂಚನೆ ನೀಡಿದರು.

ಮತಗಟ್ಟೆಯ ಎದುರು ಮತಗಟ್ಟೆಯ ಸಂಖ್ಯೆ, ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಬೇಕು. ಮತ ಕೇಂದ್ರಕ್ಕೆ 200 ಮೀಟರ್ ದೂರದಲ್ಲಿ ಕೆಂಪು ಪಟ್ಟಿಯನ್ನು ಹಾಕಿ, ಅದರ ಹೊರಭಾಗದಲ್ಲಿ ಮತ ಯಾಚನೆಗೆ ಅವಕಾಶ ಮಾಡಿಕೊಡಬೇಕು. ಇಂದಿನಿಂದಲೇ ಎಲ್ಲ ಚುನಾವಣಾಧಿಕಾರಿಗಳು ಚುನಾವಣೆ ಮುಗಿಯುವ ತನಕ ಯಾವುದೇ ದೂರುಗಳು ಬಾರದ ಹಾಗೆ ಕೆಲಸ ಮಾಡಬೇಕೆಂದರು.

ಮತದಾನದ ದಿನದಂದು ಚುನಾವಣಾಧಿಕಾರಿಗಳು ಪ್ರತೀ ಒಂದು ಗಂಟೆಗೊಮ್ಮೆ ಮತದಾನವಾದ ಬಗ್ಗೆ ಮಾಹಿತಿ ನೀಡಬೇಕು. ಮತಗಟ್ಟೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ರಾತ್ರಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.

ಕೊಡಗು ಜಿಲ್ಲೆಯ ಚುನಾವಣಾ ವೀಕ್ಷಕರಾದ ವಿ.ಎ. ದೇವರಾಜು ಮಾತನಾಡಿ, ಮತ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆಯನ್ನು ಜಾರಿ ಮಾಡುವುದು ಎಲ್ಲ ಅಧಿಕಾರಿಗಳ ಕೆಲಸವಾಗಿದೆ. ಹಣಬಲ ಮತ್ತು ಜನಬಲವನ್ನು ಚುನಾವಣೆಯಲ್ಲಿ ದುರುಪಯೋಗಪಡಿಸಿಕೊಳ್ಳದಂತೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಚುನಾವಣೆಯು ಪಾರದರ್ಶಕ ಹಾಗೂ ಮುಕ್ತವಾಗಿ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸೆಕ್ಟರ್ ಅಧಿಕಾರಿಗಳು ಕ್ಷೇತ್ರದಲ್ಲಿ ಮತಗಟ್ಟೆಗಳಿಗೆ ಭೇಟಿ ಮತ್ತು ಮತದಾರರನ್ನು ಭೇಟಿ ಮಾಡಿ ಮಾಹಿತಿ ಪಡೆಯಬೇಕು. ಪರವಾನಗಿ ಇಲ್ಲದ ಯಾವುದೇ ವಾಹನಗಳಿಗೆ ಪ್ರಚಾರಕ್ಕೆ ಹಾಗೂ ಸಾರ್ವಜನಿಕ ಮತ್ತು ಸ್ವಂತ ಕಟ್ಟಡಗಳ ವಿರೂಪಗೊಳಿಸಿ ಪ್ರಚಾರ ಮಾಡಲು ಅವಕಾಶ ಮಾಡಿಕೊಡಬಾರದು. ಯಾವುದೇ ಸಭೆ ಸಮಾರಂಭಗಳು ನಡೆದರೂ ಅಲ್ಲಿ ಖುದ್ದು ಹಾಜರಿದ್ದು ಮಾಹಿತಿ ಸಂಗ್ರಹಿಸಬೇಕು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಾಂಡು, ತಹಶೀಲ್ದಾರ್ ಗೋವಿಂದರಾಜು, ಡಿವೈಎಸ್‍ಪಿ ಶೈಲೇಂದ್ರ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.