ಕನ್ಯಾಮಾಸ ಕಳೆದು ತುಲಾಮಾಸದ ಸಂಕ್ರಮಣ ಕಾಲಕ್ಕೆ (ಅಕ್ಟೋಬರ್ ತಿಂಗಳಲ್ಲಿ) ಹಸಿರಿನ ವೈಭವ ಕೊಡಗಿನ ಉದ್ದಗಲಕ್ಕೂ ಕಂಗೊಳಿಸುತ್ತದೆ. ಒಯ್ಯ ಕಾಕುವ ಹಾಡಿನಲ್ಲಿ ಬಂದಂತೆ ಬಿಸಿಲಿನಲ್ಲಿ ದ್ಯುತಿಸಂಶ್ಲೇಷಣೆ ಪಡೆದ ಭತ್ತದ ಪೈರು ಹೊರವಾಗಿ ನಿಗುರಿದ ಸನ್ನಿವೇಶ, ಚಟುವಟಿಕೆಯ ಮುಖ ಹೊತ್ತ ಮರಗಿಡಗಳು ಖುಷಿಕೊಡುತ್ತವೆ. ಹಸಿರಿನೊಡನೆ ಮಳೆಗಾಲದಲ್ಲಿ ಕಾಯಕ ನಡೆಸಿ, ವಿರಾಮದಲ್ಲಿ ಬೇಟೆಯ ಖುಷಿಯನ್ನು ಪಡೆದು ಆದ ಮೇಲೆ ಮುಂದೆ ಕಾಲಿಡುವ ತುಲಾಸಂಕ್ರಮಣದ ಹಬ್ಬಕ್ಕೆ ಸಿದ್ದತೆ ನಡೆಸುವುದು ಕೊಡಗಿನವರಿಗೆ ಬಂದ ಪ್ರಾಚೀನ ಪದ್ಧತಿ. ತುಲಾಸಂಕ್ರಮಣ ಎಂಬ ಶಬ್ಧದಲ್ಲಿ ಕಾವೇರಿಯ ಸಾನ್ನಿಧ್ಯದ ಭಾವ ಒದಗಿದಂತೆ ‘ಕಾವೇರಿ’ ಎಂದರೆ ಕೊಡಗಿನ ಹೆಸರು ತಟ್ಟನೆ ಮುಂದೆ ನಿಲ್ಲುತ್ತದೆ. ಕೊಡವರ ಗೃಹದೇವತೆಯೆ ಕಾವೇರಿ, ಅಲ್ಲದೆ ಪ್ರಾತಃಸ್ಮರಣೀಯ ಸಪ್ತ ನದಿಗಳಲ್ಲಿ ಅವಳ ಹೆಸರು ಆಪ್ಯಾಯಮಾನ.
ಕನ್ನಡನಾಡಿನ ಸಹ್ಯಾದ್ರಿ ಶ್ರೇಣಿಯಲ್ಲಿ ಬ್ರಹ್ಮಗಿರಿ, ಇದಕ್ಕೆ ಮೈಚಾಚಿಕೊಂಡ ಕೊಡಗಿನ ನೆಲದಲ್ಲಿ ಹುಟ್ಟು ಪಡೆದಿರುವ ಕಾವೇರಿಗೆ ‘ತಲಕಾವೇರಿ’, ‘ಮೊದಲ್ಕಾವೇರಿ’ ‘ಮೂಲಕಾವೇರಿ’ ಎಂಬೆಲ್ಲ ಹೆಸರು ಪ್ರಾಚೀನ ಪ್ರಸಿದ್ಧ. ಶಾಸನಗಳಲ್ಲಿ ಆ ಹೆಸರಿಗೆ ಮಾನ್ಯತೆ, ಆ ಹೆಸರಿನ ‘ರೂಪಕ’ ಶಕ್ತಿ ವಿದಿತವಾದ ಕಾರಣವೆ ‘‘ಶಾಸನಗಳು ಕನ್ನಡ ಸಾಹಿತ್ಯ ತಲಕಾವೇರಿ’’ ಎಂಬ ವಾಕ್ಯ ಪ್ರೌಢ ಹಾಗೂ ಜನಪ್ರಿಯವೆನಿಸಿದೆ. ಪುರಾಣ ಕಾಲಕ್ಕೂ ಮುಂಚಿನ ಅಸ್ತಿತ್ವದ ಹೆಸರಲ್ಲವೆ ? ಕ್ರಿ.ಶ. 550ರ ಬಾದಾಮಿ ಚಾಲುಕ್ಯರ ಶಾಸನದಿಂದ ಹಿಡಿದು 10ನೇ ಶತಮಾನದ ಮಡಿಕೇರಿ ಶಾಸÀನ 11ನೇ ಶತಮಾನದ ಮಾಲಂಬಿ ಶಾಸನ, 18ನೇ ಶತಮಾನದ ಮೈಸೂರರಸರ ಶಾಸನಗಳೇ ಅಲ್ಲದೆ ಅರ್ವಾಚೀನ ಪ್ರಕಟನಾ ಮಾಧ್ಯಮಗಳಲ್ಲಿ ಕಾವೇರಿಯ ಹೆಸರು ನಿತ್ಯಕೇಳುವೆಯಾಗಿದೆ. ಇವೆಲ್ಲಕ್ಕೂ ಕಾರಣವಿದೆ.
ಕನ್ನಡನಾಡೇ ಏಕೆ ದಕ್ಷಿಣಗಂಗೆ ಎನಿಸಿದ ಕಾವೇರಿ, ತಲಕಾವೇರಿಯಿಂದ ತಮಿಳು ನಾಡಿನ ಪೂಂಪುಹಾರ್ ಬಳಿ ಸಾಗರದೊಡನೆ (ಬಂಗಾಳಕೊಲ್ಲಿ) ಮಿಲನವಾಗುವವರೆಗೆ, ಹರಿಯುತ್ತಾಳೆ ; ಸುಮಾರು 490 ಮೈಲಿಗಳವರೆಗೆ ಬಳಕುತ್ತ, ಆಳವಾಗುತ್ತ, ವಿಶಾಲವಾಗುತ್ತ ಹಿಗ್ಗಿ-ಕುಗ್ಗಿ ಪರಿಸರ ನೆಲೆಗೆ ಅನುಕೂಲವಾಗಿ ಹರಿಯುತ್ತಾಳೆ. ನಾಡಿನ ಜನಕ್ಕೆ ಅಶನದ ಆಸರೆಯಾಗಿದ್ದಾಳೆ. ಕಾವೇರಿ ತೀರದ ಜನಕ್ಕೆ ಜಲನಿಧಿಯಾಗಿದ್ದಾಳೆ. ಕರ್ನಾಟಕದಲ್ಲಿ 3 ಲಕ್ಷ, ತಮಿಳುನಾಡಿನಲ್ಲಿ ಸುಮಾರು 16 ಲಕ್ಷ ಎಕರೆಗಳಿಗೂ ಮೀರಿ ಫಲವತ್ತಾದ ಬೆಳೆಗೆ ಕಾರಣಳಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಕೊಡಗಿನ ಜನರ ಬದುಕು, ಭಕ್ತಿ ಭಾವಗಳಲ್ಲಿ ತನ್ಮಯಳಾಗಿರುವುದು ಸಹಜ. ಅಂತೇ ಕೊಡವರ ಗೃಹದೇವತೆ ಕಾವೇರಿ; ನಿಧಿಶ್ಯಾಮಲೆ ಕಾವೇರಿ.
ಈ ಕಾವೇರಿ ಕೊಡಗಿನಲ್ಲಿ ಬಂದ ಕಥೆ ಸ್ಥಳ ಪುರಾಣದ ಮಾತು ; ಕಂಡಕಥೆ ಸ್ಕಾಂದ ಪುರಾಣದ ಸಂಗತಿ, ಬ್ರಹ್ಮನ ಕಮಂಡಲುವಿನಿಂದ ಬಂದ ಅವನ ಮಾನಸ ಪುತ್ರಿಯಾಗಿರಲಿ, ಕವೇರ ಮುನಿಗೆ ದತ್ತು ಪುತ್ರಿಯಾಗಿದ್ದಿರಲಿ ಪಾರ್ವತಿಯ ಅಂಶವಾಗಿ ಲೋಪಾಮುದ್ರೆ ಎನಿಸಿ ಅಗಸ್ತ್ಯನ ಪತ್ನಿಯಾಗಿ ಸಹ್ಯಾದ್ರಿಗೆ ತಲುಪಿ, ಅವನ ಕಮಂಡಲುವಿನಿಂದ ಜಾರಿ ಬಂದಿರಲಿ, ಜನತೆಯ ಗಮನಕ್ಕೆ ಗೋಚರಿಸಿದ್ದು 2500 ವರ್ಷಗಳ ಹಿಂದೆಯೆ ಸರಿ. ರಾಮಾಯಣ, ಮಹಾಭಾರತದಲ್ಲಿ ಆಕೆಯ ಬಗ್ಗೆ ಉಲ್ಲೇಖವಿದೆಯಲ್ಲ. ಇಂತಹ ಪವಿತ್ರ ಪ್ರಾಚೀನ ಹಿನ್ನೆಲೆ ಹಾಗೂ ಉಪಕಾರಿಯಾದ ಕಾವೇರಿಯ ಹುಟ್ಟುಹಬ್ಬ ಯಾರಿಗೆ ತಾನೆ ಸಂತಸ ತರದು ?
ತುಲಾ ಸಂಕ್ರಮಣದಲ್ಲಿ ಈ ಕಾವೇರಿಯ ಆವಿರ್ಭವ ಕೊಡಗಿನವರಿಗಷ್ಟೇ ಅಲ್ಲ ಕೊಡಗಿನಾಚಿನವರಿಗೂ ವಿಶೇಷ ಸಮಯ. ಆಕೆಯ ವಾರ್ಷಿಕ ಹುಟ್ಟುಹಬ್ಬವೇ ತಲಕಾವೇರಿಯಲ್ಲಿ ತೀರ್ಥೋದ್ಭವ, ಕೊಡವರ ಮನೆಮನೆಯಲ್ಲಿ ಹರ್ಷದೀಪೋತ್ಸವ.
ಈ ಸಂಕ್ರಮಣ ಸಮಯದಲ್ಲಿಯೇ ತೀರ್ಥೋದ್ಭವ ಒದಗುವುದೇಕೆ?
ಜ್ಯೋತಿರ್ವಿಜ್ಞಾನದ ರೀತ್ಯ, ಒಂದು ಸ್ತರದಲ್ಲಿ ಹರಿದು ಮಳೆ ಇತ್ಯಾದಿ ಪ್ರಾಕೃತಿಕ ಕಾರಣಗಳಿಂದ ಉಗಮ ಸ್ಥಾನದಲ್ಲಿ ನಿರ್ದಿಷ್ಟ ಸಮಯದಲ್ಲಿ ಜಲ ಮೇಲೆದ್ದು ಬರುತ್ತದೆ (ಕೊಡವ ಹಬ್ಬಗಳು ಪು 115 ಡಾ. ಪಿ.ಎಸ್. ರಾಮಾನುಜಂ) ಎಂಬುದೇನೋ ಸರಿ. ಆದರೆ ಮಳೆಯದಷ್ಟೇ ಕಾರಣವಾಗದು. ತುಂಬಿ ಭೋರ್ಗರೆದು ಹರಿಯುವಂತೆ ಧಾರಾಕಾರದ ಸುದೀರ್ಘ ಮಳೆಗಾಲ ಹಿಂದಿನಕಾಲ. ಈಗಿನ ಮಳೆಗಾಲ ಅದರ ಮುಂದೆ ತೀರ ತೆಳು (ಪರಿಸರದ ದೃಷ್ಟಿಯಿಂದ) ಅಂದಮೇಲೆ ಜಲವಾಹಿನಿಯ ಉದ್ಭವಕಾಲ ವ್ಯತ್ಯಾಸವಾಗದೇ? ಅಲ್ಲದೆ ವರ್ಷದಲ್ಲಿ ಒಂದು ಬಾರಿ ಮಾತ್ರ ತೀರ್ಥ ಉದ್ಭವವಾಗುತ್ತದೆಯೇ ? ಇದೇ ರೀತಿ ತೀರ್ಥೋದ್ಭವ ತೀರ್ಥ ರಾಮೇಶ್ವರ, ಹಾಲು ರಾಮೇಶ್ವರ ಕ್ಷೇತ್ರಗಳಲ್ಲಿ ಉಂಟು. ಆದರೆ ಅಲ್ಲಿ ಉದ್ಭವ ಕುಂಡಿಕೆಯಲ್ಲಿ ನೀರು ಮೊಗೆದಂತೆ ನೀರು ಉಕ್ಕುತ್ತಲೇ ಇರುತ್ತದೆ. ಹೊರಗೆ ಮಾತ್ರ ಚೆಲ್ಲಿಹೋಗದು. ತಲಕಾವೇರಿಯಲ್ಲಿ ನೀರು ನಿರಂತರ ಉದ್ಭವವಾಗದು ಎಂದರೆ, ಗುಪ್ತವಾಗಿ ಹರಿದು ಭಗಂಡ ಕ್ಷೇತ್ರದಲ್ಲಿ ಸುಜ್ಯೋತಿ, ಕನ್ನಿಕೆಯರೊಡನೆ ಸಂಗಮವಾಗಲು ಸಾಧ್ಯವಾಗುತ್ತಿರಲಿಲ್ಲ.
ಪ್ರಾಕೃತಿಕ ಈ ವಿಶೇಷ ಘಟನೆ ಮೊದಲೇ ಹೇಳಿದಂತೆ 2500 ವರ್ಷಗಳ ಸುಮಾರಿಗೆ ಸಾಹಿತ್ಯಿಕ ಉಲ್ಲೇಖಕ್ಕೆ ದೊರಕಿದೆ ದಿಟ. ಆದರೆ ಅದಕ್ಕೆ ಮುಂಚೆಯೇ ಮಾನವನ ಗಮನಕ್ಕೆ ಬಂದಿರಲೇಬೇಕು. ಭಾರತೀಯ ಸಂದರ್ಭದಿಂದಾಗಿ ಪ್ರಾಚೀನತೆ ಪಾವಿತ್ರ್ಯತೆ ಒದಗಿ ರಾಷ್ಟ್ರದ ಭಕ್ತಿಯ ಅಂತರಂಗದಲ್ಲಿ ಕಾವೇರಿ ತನ್ಮಯಳಾಗಿದ್ದಾಳೆ, ತಲ್ಲೀನಳಾಗಿದ್ದಾಳೆ.
ತುಲಾಸಂಕ್ರಮಣದಂದು ಕಾವೇರಿ ಉದ್ಭವ ಮುಹೂರ್ತ ಬಹು ಪ್ರಶಸ್ತವಾದದ್ದು. ಮೂಲಕಾವೇರಿಯ, ಮೂಲನಂಬಿಕೆಯ ಪ್ರಬಲ ಪರಂಪರೆ ಯಲ್ಲಿ ಉದ್ಭವ ಸತ್ಯಕ್ಕೆ ಪ್ರಾಶಸ್ತ್ಯ, ಪ್ರಶಸ್ತವಾದುದೇ, ಕೊಡವರು ಕೊಡಗಿಗೆ ಬಂದು ನೆಲೆಸಿದಾಗಲೋ ಅಥವಾ ಇಲ್ಲೇ ವಾಸ್ತವ್ಯವಿದ್ದು ಗಮನಿಸಿ ದಾಗಲೋ, ಕಾವೇರಿ ಅವರ ಬದುಕಿನ ಆಸರೆಯಾಗಿ ಹರಿದಿದ್ದಾಳೆ. ಉಪಕೃತರಾದ ಕೊಡವರಿಗೆ ಆಕೆಯನ್ನು ಕಂಡು ವಿಶೇಷ ಪೂಜ್ಯಭಾವ ಬಂದದ್ದು ಸಹಜ ಐತಿಹಾಸಿಕ ಸತ್ಯ. ಆಕೆಯ ವಾರ್ಷಿಕ ಉದ್ಭವ ಸಮಯಕ್ಕೆ ಮೌಲ್ಯವಾದ ತನ್ಮಯತೆ, ಅನುರಕ್ತಿಗಳು ಜನಪದ ಆಚರಣೆಗಳಲ್ಲಿ ಆಗಮೋಕ್ತ ಆಚರಣೆಗಳಲ್ಲಿ ಕೊಡಗಿನ ಜನಮಾನಸ ಪ್ರೇರಣೆಗಳಲ್ಲಿ ತುಂಬ ವಿಶಿಷ್ಟವಾಗಿ ಕಾಣುತ್ತದೆ.
ತುಲಾಮಾಸೇತು ಕಾವೇರಿ ಸರ್ವತೀರ್ಥಾಶ್ರಿತಾ ನದೀ
ಪಂಚಪಾತಕ ಸಂಹತ್ರ್ರೀ ವಾಜಿಮೇಧ ಫಲಪ್ರದಾ
ಭಕ್ತಾನುಕಂಪೇ ಮುನಿಭಾಗ್ಯಲಕ್ಷ್ಮಿ | ನಿತ್ಯೇ ಜಗನ್ಮಂಗಲ ದಾನಶೀಲೇ
ನಿರಂಜನೇ ದಕ್ಷಿಣದೇಶ ಗಂಗೇ | ಕಾವೇರಿ ಕಾವೇರಿ ಮಮ ಪ್ರಸೀದ.
ಹೀಗೆಯೇ ಹರಿದಾಸ ಮುಕ್ಕಾಟೀರ ಎಸ್. ಪೂವಯ್ಯ ಹಾಡಿದ್ದಾರೆ.
ನೀ ಪುಟ್ಟಿದ ಕೊಡಗು | ತಪೋಭೂಮಿ ಮಲೆನಾಡು |
ನೀ ಹರಿವ ನಾಡೆಲ್ಲ ಸಮೃದ್ಧಿ ಬೀಡು
ನೀ ಹರಿದು ಧುಮುಕುತ್ತ | ನೀ ಜ್ಯೋತಿ ಬೆಳಗಿಸಿದೆ
ನಿನ್ನ ತೀರ್ಥಕೆ ಸಮವು | ಇನ್ನುಂಟೆ ತೀರ್ಥ?
ಹರದಾಸ ಅಪ್ಪಚ್ಚ ಕವಿ ತಮ್ಮ ತಾಯ್ನುಡಿಯಲ್ಲಿ ಭಾವಪೂರ್ಣವಾಗಿ ಸ್ತುತಿಸಿದ್ದಾರೆ.
ಕಾವೇರಮ್ಮ ದೇವಿತಾಯಿ ಕಾಪಾಡೆಂಗಳಾ
ಬಾಳಂಡೂಂದ್ ದೇಶಕ್ಕೆಲ್ಲ ನಲ್ಲದ್ೀ ಮಾಡೀ |
ಕೇಳಿಪಟ್ಟ ಪಾಕಡಕ್ ಪೋಯಿ ಸೇರಿಯಾ ||
ಈ ಲೋಕಕ್ ಮನುಷ್ಯಕಿಜ್ಜ ಕರ್ಮಡೆಲ್ಲ ನೀ |
ಆಳ್ ಭೇದ ಕಾಣತೆಯೋ ಪಾಪತ್ೀ ಪಿಯಾ ||
ಮಾಯತುಳ್ಳದೇವಿ ನೀಡಪಾದಕ್ ಬುವಾ |
ಚಾಯಿಗೊಂಡ್ ಎಂದು ನೀನ್ ಕಾಪಾಡ್ೀ ದೇವೀ ||
ಇಡೀ ದೇಶಕ್ಕೆಲ್ಲ ಒಳ್ಳೆಯದನ್ನೂ, ಯಾವ ಭೇದವೂ ಇಲ್ಲದೆ ಮನುಷ್ಯಕುಲ ಸುಖವಾಗಿ ಬಾಳಲೆಂದು ಹರಸಿ ಹರಿದು ಹಾಲ್ಗಡಲಿಗೆ ಹೋಗಿ ಸೇರುವೆ. ಅದಕ್ಕಾಗಿ ನಿನ್ನ ಪಾದಕ್ಕೆ ನಾನು ಬೀಳುವೆ, ಕಾಪಾಡು ದೇವಿ.
ಇದಲ್ಲದೆ ಕೊಡವ ಭಾಷೆಯಲ್ಲಿ ಕಾವೇರಿ ಪುರಾಣವಿದ್ದು ಶಿವರಾತ್ರಿಯಲ್ಲಿ ಭಾಗಮಂಡಲದ ಭಗಂಡ ಕ್ಷೇತ್ರದಲ್ಲಿ ಹಾಡುವರು.
ಇವರೇ ಅಲ್ಲದೇ ನಿಜಗುಣ ಶಿವಯೋಗಿ, ಗುಬ್ಬಿ ಮಲ್ಲಣಾರ್ಯ, ಷಡಕ್ಷರದೇವ ಅವರ ಕೃತಿಗಳಲ್ಲಿ ಕಾವೇರಿಯ ಬಗ್ಗೆ ಕಾವ್ಯಭಾವಗಳು ಪುಷ್ಪವಾಗಿವೆ.
ಕಾವೇರಿಯ ಬಗ್ಗೆ ಕಾವೇರಿ ತೀರ್ಥೋದ್ಭವದ ಬಗ್ಗೆ ಪ್ರಚಾರ ಹಾಗೂ ಸಾಹಿತ್ಯ ಹೀಗೆ ಸಾಕಷ್ಟು ಬಂದಿವೆ. ಆದರೆ ಉದ್ಭವ ಸಮಯದ ದೃಶ್ಯ ಬಹು ರೋಮಾಂಚಕಾರಿ, ಪ್ರತ್ಯಕ್ಷ ದರ್ಶನದಿಂದ ಪಡೆವ ಭಕ್ತಿ ರಮ್ಯ ಅನುಭವ.
ಈ ಸಂಕ್ರಮಣ ಸಮಯದಲ್ಲಿ ಕೊಡವರ ಮನೆಯಲ್ಲಿ ಹಾಗೂ ಉದ್ಭವ ನೆಲೆಯಲ್ಲಿ ನಡೆಯುವ ಸಂಗತಿಗಳು ಆಕರ್ಷಕವಾಗಿವೆ.
ಕೊಡವರ ಗೃಹಗಳಲ್ಲಿ ಆಚರಣೆ
ಸಂಕ್ರಮಣದ ಹಬ್ಬ ಕೊಡವರಿಗೆ ಎರಡು ದಿನ. ತೀರ್ಥೋದ್ಭವದ ದಿನ ಹಾಗೂ ಮರುದಿನ ಕಾವೇರಿಯ - ‘ಕಣಿಪೂಜು’ - ಪ್ರತೀಕವನ್ನು ಪೂಜಿಸುವ ದಿನ.
ಹಬ್ಬದ ಮೊದಲ ದಿನದ ಸಮಯಕ್ಕೆ ‘ಬೊತ್ತ್’ ಅಂದರೆ ನಿಶಾನಿಯನ್ನು ಕೊಡವರು ಚುಚ್ಚಿಡುತ್ತಾರೆ. ಬಿದಿರು ಅಥವಾ ‘ಪೊಂಗ’ ಮರದ ಕೋಲುಗಳನ್ನು ಕತ್ತರಿಯಾಕಾರದಲ್ಲಿ ನಿಲ್ಲಿಸುತ್ತಾರೆ. ಅವುಗಳ ಬೇರ್ಪಟ್ಟ ತುದಿಗೆ ಕೈಬಳ ಬಳ್ಳಿಯನ್ನು ವೃತ್ತಾಕಾರವಾಗಿ (ಸಾಮಾನ್ಯವಾಗಿ ಎರಡು ಸುತ್ತು) ಸಿಕ್ಕಿಸಿ ‘ಬೊತ್ತಲೆ’ ಎನ್ನುತ್ತಾರೆ. ಇದನ್ನೇ ಸ್ಥಿರಾಸ್ಥಿಗಳಾದ ಬಾವಿ, ಗದ್ದೆ, ಕೆರೆ, ದನದ ಕೊಟ್ಟಿಗೆ, ತೋಟ, ಮನೆಗಳ ಬಳಿ ನಿಲ್ಲಿಸುವ ನಿಶಾನಿ ಎನ್ನುತ್ತಾರೆ. ಗದ್ದೆ - ತೋಟಗಳಲ್ಲಿ ಬೊತ್ತು ಹಾಕುವಾಗ ‘ಪಾಂಡವ - ಕೌರವ ಬೊತ್ತೋ, ನೆರಳೋ ಕಾಂಡೋ ಕಡರೋಕ್ಞೊ... ಎಂದು ಕೂಗುವರು. ಇದು ಪಾಂಡವರ ಕಾಲದಿಂದ ನಡೆದುಬಂದಂತೆ.
ಸಂಜೆ ಕಾವೇರಿ ಮೂರ್ತಿಯ ತಯಾರಿಕೆಯಲ್ಲಿ ಕೊಡವರು ತರಕಾರಿ ಅಥವಾ ಸೌತೇಕಾಯಿ ಅಥವಾ ತೆಂಗಿನ ‘ಕಣಿಪೂಜು’ ತಯಾರಿಸುವರು. ಪೂಜೆಯ ಹಿಂದಿನ ದಿನ ಇಬ್ಬನಿಯಲ್ಲಿಟ್ಟ ಹೂವನ್ನು ಮರುದಿನ ಕಣಿಪೂಜುವಿಗೆ ಬಳಸುವರು.
ತೀರ್ಥೋದ್ಭವದ ದಿನ ಸಂಕ್ರಮಣ ಹೂ(ಚೌತಿಪೂ)ವಿನಿಂದ ಪೂಜೆ (ಇದು ಶೇವಂತಿಗೆಯನ್ನು ಹೋಲುತ್ತದೆ) ತೀರ್ಥೋದ್ಭವದ ಮಾರನೆ ದಿನ ಕೆಂಪುರೇಶ್ಮೆ ವಸ್ತ್ರವನ್ನು ತ್ರಿಕೋನಾಕಾರ ಮಾಡಿಟ್ಟು ಅದರ ಮೇಲೆ ಪ್ರತಿಮೆ ಇಟ್ಟು ಸುತ್ತ ಹೂವಿನಿಂದ ಅಲಂಕರಿಸುವರು. ಆಭರಣಗಳನ್ನು ತೊಡಿಸುವರು. ವೀಳೆಯ ಅಡಿಕೆ ತಟ್ಟೆಯ ಅಕ್ಕಿಯ ಮೇಲಿಟ್ಟ ಈ ಅಲಂಕೃತ ಪ್ರತಿಮೆಯನ್ನು ನೆಲ್ಲಕ್ಕಿ ನಡುಬಾಡೆಯಲ್ಲಿ ಪ್ರತಿಷ್ಠಿಸಿ ಪೂಜಿಸುವರು. ‘ತಳಿಯಕ್ಕಿ ಬೊಳಕು(ಅಕ್ಕಿ ತುಂಬಿದ ತಟ್ಟೆಯ ದೀಪ)ವಿನಿಂದ ಬೆಳಗುವರು. ಇದನ್ನು ಮುಂಜಾವಿನಲ್ಲೇ ಎದ್ದು ಶುಚಿರ್ಭೂತಳಾದ ಮುತ್ತೈದೆ ಸಿದ್ಧಪಡಿಸಿ, ಕಣಿಪೂಜಿಸಬೇಕು. ಸರದಿಯಂತೆ ಮನೆಯವರೆಲ್ಲರೂ ದೀಪ ಬೆಳಗಿ ಅಕ್ಕಿ ಪ್ರೋಕ್ಷಿಸಿ ಪೂಜಿಸಬೇಕು. ನಂತರ ಹಿರಿಯರಿಗೆ ನಮಿಸಬೇಕು. ಮೂರು ದಿನಗಳವರೆಗೆ ಈ ಪೂಜು ಇರಬೇಕು. ತೌರಿಗೆ ಹೆಣ್ಣು ಮಕ್ಕಳು ಬಂದು, ಇತರ ಬಂಧುಗಳೂ ಬಂದು ಕಣಿಪೂಜುವಿನ ದರ್ಶನ ಮಾಡಿ, ಹಿರಿಯರಿಗೆ ನಮಸ್ಕರಿಸುತ್ತಾರೆ. ಕಣಿಪೂಜೆಯ ನಂತರ ‘ಬೊತ್ತ’ನ ಮೇಲೆ ದೋಸೆ, ಕಡಬು, ಬೆಲ್ಲ, ತೆಂಗಿನಚೂರು, ಜೇನುಗಳನ್ನು ಎಲೆಯಲ್ಲಿ ಜೋಡಿಸಿ ಇಡುತ್ತಾರೆ.
ಬೊತ್ತಲೆಯನ್ನು ವೃತ್ತಾಕಾರದಲ್ಲಿ ನಿಲ್ಲಿಸಲು ಕಾರಣವಿದೆ. ಕಾವೇರಿ ಈ ಸಂಕ್ರಮಣದಲ್ಲಿ ನಾಡೆಲ್ಲವನ್ನೂ ನೋಡಲು ಬರುತ್ತಾಳಂತೆ. ನಾಡಿನ ಜನ ಈ ಸಂಕೇತವನ್ನು ಸಿಗಿಸಿ ನೈವೇದ್ಯವಿಟ್ಟಿದ್ದರೆ, ಅವರೆಲ್ಲರೂ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಸಂತೋಷಪಡುವಳಂತೆ. ಅಲ್ಲದೆ ಕಾವೇರಿ ತೀರ್ಥೋದ್ಭವದ ಸಮಯದಲ್ಲಿ ತಮ್ಮ ಬಾವಿ, ಕೆರೆ ಕಟ್ಟೆಗಳಲ್ಲಿಯೂ ಉಕ್ಕಿ ಬರುತ್ತಾಳೆ ಎಂಬ ನಂಬಿಕೆ ಕೊಡವರದು. ಇದರಲ್ಲಿ ಕಾವೇರಿ ಈ ಲೋಕವನ್ನೆಲ್ಲ ‘ಬೊತ್ತ್’ನ ವೃತ್ತಾಕಾರದಂತೆ ಬಳಸಿ ಸಮೃದ್ಧಿಗೊಳಿಸಿ ಎಂಬ ಆಶಯವೂ ಕಾಣುತ್ತದೆ. ಈ ಸಂದರ್ಭದಲ್ಲಿ 7 ತಲೆ ಹಿಂದಿನ ಹಿರಿಯನಿಗೆ (ಗುರು ಕಾರೋಣ), ಹೀಗೆಯೆ ನೈವೇದ್ಯವಿರುತ್ತದೆ.
ಕಣಿ ಪೂಜೆಯನ್ನು ಪೂಜೆಯನಂತರ (ಸಾಮಾನ್ಯವಾಗಿ 3 ದಿನಗಳ ನಂತರ) ಹೊಳೆಯಲ್ಲಿ ಅಥವಾ ಹಾಲು ಬರುವ ಮರದ ಬಳಿ ವಿಸರ್ಜಿಸುತ್ತಾರೆ. ‘ಕಣಿಪೂಜು’ವಿನಲ್ಲಿ ವಿಶೇಷ ಸಂಕೇತವೂ ಇದೆ. ಬದುಕಿಗೆ ಉಪಯೋಗವಾಗುವ ಬೆಳೆದ ವಸ್ತುವಿನಲ್ಲಿ ದೈವತ್ವ ಕಾಣುವುದು ಕೊಡವರ ಜನಪದ ಜಾಯಮಾನವೆನಿಸುತ್ತದೆ.
ಈ ಆಚಾರಗಳ ಪ್ರಭಾವ ಕೊಡವೇತರರಲ್ಲಿ, ಜಮ್ಮ ಮಾಪಿಳ್ಳೆಗಳಲ್ಲಿ (ಬಹು ಮೊದಲಿಗೆ ಕೊಡವರಾಗಿದ್ದರು) ಕಂಡುಬರುತ್ತದೆ. ಕೊಡವೇತರ ಮನೆತನಗಳಾದ ಕಾಮಯಂಡ ಮತ್ತು ಪೊನ್ನೀರ್ ಮನೆತನಗಳಲ್ಲಿ (ಕೇರಳದಿಂದ ಬಂದ ವಿಶ್ವಕರ್ಮ ಜನಾಂಗದವರು) ಗೌಡರು, ಹೆಗ್ಗಡೆ ಮುಂತಾದವರಲ್ಲಿ ಕೊಡವರಂತೆಯೇ ತೀರ್ಥೋದ್ಭವ ಪೂಜೆಯುಂಟು. ಬೊತ್ತೆಲೆ ನಿಲ್ಲಿಸುವುದುಂಟು. ಕಾಟರಕೊಲ್ಲಿ ಜಮ್ಮ ಮಾಪಿಳ್ಳೆಗಳಲ್ಲಿ ಈ ಸಂಕ್ರಮಣದ ಹಬ್ಬದಲ್ಲಿ ಬೊತ್ತಲೆ ನಿಲ್ಲಿಸುವ, ಮನೆಯಲ್ಲಿ ಸಿಹಿಯೂಟ ಮಾಡುವ ಪದ್ಧತಿ ನಡೆದುಬರುತ್ತಿದೆ. ಆದರೆ ಇತ್ತೀಚಿನ ಸಮಕಾಲೀನ ಬೆಳವಣಿಗೆಗಳಲ್ಲಿ ಹೊಸ ಪೀಳಿಗೆಗಳು ಅವರ ಮನೆತನಗಳಲ್ಲಿ ವಿಭಿನ್ನವಾಗಿ ಯೋಚಿಸತೊಡಗಿವೆ. ಧರ್ಮಶಾಸ್ತ್ರದ ರೀತ್ಯಾ ಹೊರಗಿನಿಂದ ಬಂದ ಕುಟುಂಬಗಳೂ ಕೊಡವರ ಆಚಾರ ಪದ್ಧತಿಗಳನ್ನು ರೂಢಿಸಿಕೊಂಡಿದ್ದು ಭಾರತೀಯ ಸಂಸ್ಕಾರ.
- ಡಾ. ಎಂ.ಜಿ. ನಾಗರಾಜ್.