ಮಡಿಕೇರಿ, ಡಿ. 19 : ಸರ್ಕಾರದ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುವ ತರಬೇತಿ ಕಾರ್ಯಕ್ರಮಗಳ ಜಿಲ್ಲಾ ಕೌಶಲ್ಯ ಮಾಹಿತಿ ಕೈಪಿಡಿಯನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ಬಿಡುಗಡೆಗೊಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೈಪಿಡಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಜಿಲ್ಲೆಯ ಕೌಶಲ್ಯ ಬೇಡಿಕೆಯನ್ನು ಅರಿತು ತರಬೇತಿ ಸಂಯೋಜನೆಗಳನ್ನು ಸೃಜಿಸುವಂತೆ ನಿರ್ದೇಶನ ನೀಡಿದರು.
ವಿವಿಧ ಇಲಾಖೆಗಳ ವೃತ್ತಿ ತರಬೇತಿ ಸಂಬಂಧಿಸಿದಂತೆ ಒಂದೇ ವೇದಿಕೆಯಡಿ ಯೋಜನೆ ರೂಪಿಸಲಾಗಿದ್ದು, ವೆಬ್ಸೈಟ್ನಲ್ಲಿ (ತಿತಿತಿ.ಞoಜಚಿgu.ಟಿiಛಿ.iಟಿ) ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದ್ದು, ವಿವಿಧ ತರಬೇತಿಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ವಿವಿಧ ಇಲಾಖೆಗೆ ವೃತ್ತಿ ಕೌಶಲ್ಯ ತರಬೇತಿ ಸಂಬಂಧಿಸಿದಂತೆ ನಿಖರ ಮಾಹಿತಿ ಇರಬೇಕು. ಸಮಾಜ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಒಳಗೊಂಡಂತೆ ಹಲವು ಇಲಾಖೆಗಳ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾ ಕೌಶಲ್ಯ ಮಿಷನ್ ಯೋಜನೆಯ ಅಧಿಕಾರಿ ಉಮಾ ಮಾತನಾಡಿ, ಮಾಹಿತಿ ಕಾರ್ಯಾಗಾರ, ತರಬೇತಿ ಗುಣಮಟ್ಟ, ಕೈಗಾರಿಕೆಗಳ ಜೊತೆ ಸಮನ್ವಯ ಸಾಧಿಸುವುದು, ಸ್ವ ಉದ್ಯೋಗ, ಗ್ರಾ.ಪಂ.ಗಳ ಮೂಲಕ ಸಮನ್ವಯತೆ, ಸಣ್ಣ ಕೈಗಾರಿಕೆಗಳ ನಿರ್ವಹಣೆ, ಕೃಷಿ ಸಂಬಂಧಿಸಿದ ಉಪ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ವೀರೇಶ್ ಮಾತನಾಡಿ, ವೃತ್ತಿ ತರಬೇತಿ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಮಾಹಿತಿ ಒಂದೇ ವೇದಿಕೆಯ ಮೂಲಕ ಜಿಲ್ಲೆಯ ಯುವಜನತೆಗೆ ಲಭ್ಯವಾಗಿ, ಗುಣಮಟ್ಟದ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತÀರ್ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿ ಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಸುರೇಶ್, ರೋಟರಿ ಸಂಸ್ಥೆಯ ಧನಂಜಯ ಇತರರು ಜಿಲ್ಲಾ ಕೌಶಲ್ಯ ಮಿಷನ್ ಯೋಜನೆಯಡಿ ತರಬೇತಿ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಸಲಹೆ ನೀಡಿದರು.