ಸೋಮವಾರಪೇಟೆ, ಡಿ.19: ಜಿಂಕೆಯ ಎರಡು ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪಟ್ಟಣ ಸಮೀಪದ ಕಿಬ್ಬೆಟ್ಟ ಗ್ರಾಮದ ಬಸ್ ನಿಲ್ದಾಣದಲ್ಲಿ ಈರ್ವರು ಆರೋಪಿಗಳು ಬೈಕ್‍ನಲ್ಲಿ ಆಗಮಿಸಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಸಂದರ್ಭ ಧಾಳಿ ನಡೆಸಿದ ಪೊಲೀಸರು, ಪ್ಲಾಸ್ಟಿಕ್ ಚೀಲದಲ್ಲಿದ್ದ ಜಿಂಕೆಯ ಕೊಂಬುಗಳ ಸಹಿತ ಹೊಳೆನರಸೀಪುರದ ಪ್ರಮೋದ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿದ್ದ ಮತ್ತೊಬ್ಬ ಆರೋಪಿ ಶನಿವಾರಸಂತೆ ಸಮೀಪದ ನಿಡ್ತಕೊಪ್ಪಲಿನ ಯತೀಶ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಯಿಂದ ಜಿಂಕೆ ಕೊಂಬುಗಳು ಹಾಗೂ ದ್ವಿಚಕ್ರವಾಹ ನವನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಠಾಣಾಧಿಕಾರಿ ಎಂ.ಡಿ. ಅಪ್ಪಾಜಿ, ಹೆಡ್‍ಕಾನ್ಸ್‍ಟೇಬಲ್ ಕೆ.ಎಸ್. ಚಂಗಪ್ಪ, ಸಿಬ್ಬಂದಿಗಳಾದ ಎಂ.ಎನ್. ಗಣೇಶ್, ಶೇಖರ್ ಅವರುಗಳು ಭಾಗವಹಿಸಿದ್ದರು.