ಮಡಿಕೇರಿ, ಡಿ. 18: ಪ್ರತಿಭಾನ್ವಿತ ಹಾಕಿ ಆಟಗಾರ, ಅಮ್ಮತ್ತಿಯವರಾಗಿದ್ದ ನೆಲ್ಲಮಕ್ಕಡ ಸಜಿ ನಾಣಯ್ಯ (39) ಅವರು ತಾ. 16 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರ (ಸಾಯಿ) ಮೂಲಕ ಹಾಕಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಸಜಿ ನಾಣಯ್ಯ ತಮ್ಮ ಕಲಾತ್ಮಕ ಆಟದಿಂದಾಗಿ ಜಿಲ್ಲೆಯಲ್ಲಿ ಹೆಸರಾಗಿದ್ದರು. ನೆಲ್ಲಮಕ್ಕಡ ಕುಟುಂಬದ ಪರ ಕೊಡವ ಕೌಟುಂಬಿಕ ಹಾಕಿ ಉತ್ಸವದ ಎಲ್ಲಾ ವರ್ಷದ ಪಂದ್ಯಾವಳಿಗಳಲ್ಲಿಯೂ ಆಡಿದ್ದ ಸಜಿ ನೆಲ್ಲಮಕ್ಕಡ ಕುಟುಂಬ ಪ್ರಶಸ್ತಿಗಳಿಸುವಲ್ಲೂ ಪ್ರಮುಖ ಪಾತ್ರವಹಿಸಿದ್ದರು.

ಇದಲ್ಲದೆ ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ಪರ ಹಲವರು ಹಾಕಿ ಪಂದ್ಯಾವಳಿ, ನೆಸ್ಲೆ ಕೊಡಗು ಕಪ್ ಪಂದ್ಯ ಸೇರಿದಂತೆ ಹಲವು ಹಾಕಿ ಟೂರ್ನಿಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಇವರು ಅಮ್ಮತ್ತಿಯ ನೆಲ್ಲಮಕ್ಕಡ ಅಯ್ಯಣ್ಣ ಹಾಗೂ ಭವಾನಿ ದಂಪತಿಯ ಪುತ್ರರಾಗಿದ್ದು, ಅವಿವಾಹಿತರಾಗಿದ್ದರು. ಇವರ ಸಹೋದರ ಸಂಕಿ ಪೂವಣ್ಣ ಅವರು ಕೂಡ ಹಾಕಿ ಆಟಗಾರರಾಗಿದ್ದಾರೆ.