ಕುಶಾಲನಗರ, ಡಿ. 18: ಕಾವೇರಿ ನದಿ ಪ್ರವಾಹ ಶಾಶ್ವತವಾಗಿ ತಡೆಗಟ್ಟುವ ಹಿನ್ನೆಲೆ ಭಾಗಮಂಡಲ ಸಂಗಮದಿಂದ ಕುಶಾಲನಗರ ಹಾರಂಗಿ ಸಂಗಮ ತನಕ ನದಿ ಸರ್ವೆ ಕಾರ್ಯ ನಡೆಸಲು ಕಾವೇರಿ ನೀರಾವರಿ ನಿಗಮದಿಂದ ಟೆಂಡರ್ ಕರೆಯಲಾಗಿದೆ ಎಂದು ನಿಗಮದ ಕಾರ್ಯಪಾಲಕ ಅಭಿಯಂತರ ರಾಜೇಗೌಡ ತಿಳಿಸಿದ್ದಾರೆ. ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸುವಂತೆ ಮನವಿ ಸಲ್ಲಿಸಿದ ಸಂದರ್ಭ ಅವರು ಮಾಹಿತಿ ನೀಡಿದರು. ಕಳೆದ ಮೂರು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿಯುವ ಮೂಲಕ ಕೊಡಗು ಜಿಲ್ಲೆಯ ಹಲವು ಗ್ರಾಮಗಳು, ಪಟ್ಟಣಗಳು ಜಲಾವೃತಗೊಳ್ಳುವುದರೊಂದಿಗೆ ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಸೂಚನೆಯಂತೆ ನಿಗಮದ ಮೂಲಕ ನದಿಯ ಮೂಲಸ್ವರೂಪದ ಬಗ್ಗೆ ಮಾಹಿತಿ ಕಲೆಹಾಕಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯ ಭಾಗಮಂಡಲ, ಬೇಂಗೂರು, ಕುಂದಚೇರಿ, ನಾಪೋಕ್ಲು, ಬಲ್ಲಮಾವಟಿ, ಪಾರಾಣೆ, ಹೊದ್ದೂರು, ಮೂರ್ನಾಡು, ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಾಕೋಟುಪರಂಬು, ಬೇತ್ರಿ, ಹಾಲುಗುಂದ, ಕನ್ನಂಗಾಲ, ಸಿದ್ದಾಪುರ ಸೇರಿದಂತೆ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ನೆಲ್ಲಿಹುದಿಕೇರಿ, ದುಬಾರೆ, ಗುಡ್ಡೆಹೊಸೂರು, ಕುಶಾಲನಗರ, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ ತನಕ ನದಿ ವ್ಯಾಪ್ತಿಯ ಸರ್ವೆ ನಡೆಸಲಾಗುವುದು. ಈ ಮೂಲಕ ಕಾವೇರಿ ನದಿ ಮತ್ತು ತಟಗಳ ಸಂರಕ್ಷಣೆ ಅಭಿವೃದ್ಧಿ ಮತ್ತು ನದಿಯ ಹಲವೆಡೆ ತಡೆಗೋಡೆಗಳನ್ನು ನಿರ್ಮಿಸುವ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಕುಶಾಲನಗರದಲ್ಲಿ ಕಳೆದ ಬಾರಿ ಕೈಗೊಂಡ ನದಿ ನಿರ್ವಹಣೆ ಕಾಮಗಾರಿಯ ಬಾಕಿ ಉಳಿದ ಕೆಲಸವನ್ನು ನದಿ ನೀರಿನ ಹರಿವು ಕಡಿಮೆಯಾದ ತಕ್ಷಣ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ ರಾಜೇಗೌಡ, ಈಗಾಗಲೇ ಹಾರಂಗಿ ಹೂಳೆತ್ತುವ ಮತ್ತು ಜಲಾನಯನ ವ್ಯಾಪ್ತಿಯ ಅಭಿವೃದ್ಧಿ ಕೆಲಸಕ್ಕೆ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಮೂಲಕ ಸರಕಾರದಿಂದ ರೂ. 130 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಹಾರಂಗಿ ನದಿ ತಟದಲ್ಲಿರುವ ಸೈನಿಕ ಶಾಲೆ, ಮೊರಾರ್ಜಿ ಶಾಲೆಗಳಿಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಲು ರೂ. 50 ಕೋಟಿ ವೆಚ್ಚದ ಕಾಮಗಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ವೀರಾಜಪೇಟೆ ತಾಲೂಕಿನ ಅರಮೇರಿ ವ್ಯಾಪ್ತಿಯಲ್ಲಿ ರೂ. 8 ಕೋಟಿ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಸರಕಾರ ಅನುಮೋದನೆ ನೀಡಿದೆ ಎಂದು ಮಾಹಿತಿ ಒದಗಿಸಿದರು.