ಕುಶಾಲನಗರ, ಡಿ. 18: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಅಮರನಾಥ್ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದಾರೆ. ದಶಕಗಳ ಸಮಸ್ಯೆಯಾದ ರಸ್ತೆ, ಚರಂಡಿ ಅವ್ಯವಸ್ಥೆ, ಬೀದಿದೀಪಗಳ ಕೊರತೆ ನೀಗಿಸಲು ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಬಾರಿ ಮನವಿ ಮಾಡಿದರೂ ಕೂಡ ಜನಪ್ರತಿನಿಧಿಗಳು ಬಡಾವಣೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿಲ್ಲ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.

ಬಹುತೇಕ ಬಡಾವಣೆಗೆ ಸಮರ್ಪಕ ರಸ್ತೆ, ಚರಂಡಿ ಇಲ್ಲವಾಗಿದೆ. ಮಳೆಗಾಲದಲ್ಲಿ ಇಲ್ಲಿನ ಮಾರ್ಗಗಳು ಸಂಪೂರ್ಣ ಕೆಸರುಮಯವಾಗುತ್ತಿದ್ದು ಸಂಚರಿಸಲು ಅನಾನುಕೂಲ ಉಂಟಾಗುತ್ತದೆ. ಕೆಲವೆಡೆ ಇರುವ ಚರಂಡಿಗಳಲ್ಲಿ ಸರಾಗವಾಗಿ ಹರಿಯುತ್ತಿದ್ದ ತ್ಯಾಜ್ಯ ನೀರಿಗೆ ತಡೆಯೊಡ್ಡಿರುವ ಯುಜಿಡಿ ಇಲಾಖೆಯವರು ರಸ್ತೆ ಮೇಲೆ ತ್ಯಾಜ್ಯ ಹರಿಯುವಂತೆ ಮಾಡಿದ್ದಾರೆ ಎಂದು ಸ್ಥಳೀಯರಾದ ವಾಸುದೇವ್, ಕೆಂಚಪ್ಪ, ಅನಿತಾ ಕಾರ್ಯಪ್ಪ, ಗಿರಿಜ ಜೋಯಪ್ಪ, ಲಲಿತ ವಾಸುದೇವ್ ಆರೋಪಿಸಿದ್ದಾರೆ. ಈ ಹಿನ್ನೆಲೆ ಅನಾನುಕೂಲ ಎದುರಿಸುತ್ತಿರುವ ಬಡಾವಣೆಯ 50ಕ್ಕೂ ಅಧಿಕ ಮಂದಿ ಈ ಬಾರಿ ಮತದಾನದಲ್ಲಿ ಪಾಲ್ಗೊಳ್ಳದಂತೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿ ಕೆಪಿಟಿಸಿಎಲ್ ನಿವೃತ್ತ ಅಧಿಕಾರಿ ವಾಸುದೇವ್ ತಿಳಿಸಿದ್ದಾರೆ.