ರೂ. 22.36 ಲಕ್ಷ ಲಾಭ
ಕುಶಾಲನಗರ, ಡಿ. 18: ಕುಶಾಲನಗರ ಶಾರದಾ ಮಹಿಳಾ ಪತ್ತಿನ ಸಹಕಾರ ಸಂಘದ 2019-20ನೇ ಸಾಲಿನಲ್ಲಿ ವಾರ್ಷಿಕ ಮಹಾಸಭೆ ಕುಶಾಲನಗರದ ಕೊಡವ ಸಮಾಜದಲ್ಲಿ ನಡೆಯಿತು. ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶಾಂತ ಶ್ರೀಪತಿ, ಪ್ರಸಕ್ತ ಸಾಲಿನಲ್ಲಿ ಸಂಘ ರೂ. 22 ಲಕ್ಷದ 36 ಸಾವಿರ ಲಾಭಗಳಿಸಿದೆ. ಸಂಘದಲ್ಲಿ ಒಟ್ಟು 881 ಸದಸ್ಯರಿದ್ದು, ರೂ. 70 ಲಕ್ಷದ 70 ಸಾವಿರ ಪಾಲು ಬಂಡವಾಳ ಸಂಗ್ರಹವಾಗಿದೆ. ಸಂಘದಲ್ಲಿ ಚಾಲ್ತಿ ಖಾತೆ, ಉಳುವರಿ ಖಾತೆ, ನಿರಖು ಠೇವಣಿ, ಪಿಗ್ಮಿ ಸೇರಿದಂತೆ ಹಲವು ಠೇವಣಿಗಳಿದ್ದು ಪ್ರಸಕ್ತ ರೂ. 4 ಕೋಟಿ 11 ಲಕ್ಷದ 74 ಸಾವಿರ ಠೇವಣಿ ಹೊಂದಿದೆ. ಸಂಘವು ಪ್ರಗತಿಯ ಹಾದಿಯಲ್ಲಿದ್ದು ಇತರ ಸಹಕಾರ ಸಂಘಗಳು ಹಾಗೂ ಬ್ಯಾಂಕ್‍ಗಿಂತ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ವ್ಯಾಪಾರಾಭಿವೃದ್ಧಿ ಸಾಲ, ಜಾಮೀನು ಸಾಲ, ಪಿಗ್ಮಿ ಸಾಮಾನ್ಯ ಸಾಲ, ನಿರಖು ಠೇವಣಿ ಸಾಲ ನೀಡಲಾಗುತ್ತಿದ್ದು ಒಟ್ಟಾರೆ ಸಾಲ ವಸೂಲಾತಿ ಶೇ. 99.34 ರಷ್ಟು ಆಗಿದೆ. ಈ ಸಾಲಿನಲ್ಲಿ ರೂ. 8 ಕೋಟಿಗಿಂತಲೂ ಅಧಿಕ ಸಾಲ ವಸೂಲಾಗಿದೆ. ಪಾಲು ಬಂಡವಾಳದ ಮೇಲೆ ಶೇ. 10 ರಷ್ಟು ಲಾಭ ಘೋಷಿಸಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದಿರಾ ತಿಮ್ಮಪ್ಪ ಮತ್ತು ಛಾಯಾ ಗೋಪಿ ಪ್ರಾರ್ಥಿಸಿದರು, ಮಂಜುಳಾ ಎನ್. ಗುಪ್ತಾ ಸ್ವಾಗತಿಸಿದರು, ಕಳೆದ ಮಹಾಸಭೆಯ ವರದಿಯನ್ನು ಮೋಕ್ಷಲಕ್ಷ್ಮಿ ನಾರಾಯಣ್, ಆಡಳಿತ ಮಂಡಳಿಯ ವಾರ್ಷಿಕ ವರದಿಯನ್ನು ಆಶಾ ಅಶೋಕ್ ವಾಚಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಕವಿತಾ ಜಯಂತ್ ಸೇರಿದಂತೆ ನಿರ್ದೇಶಕರುಗಳು, ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಇದ್ದರು.