ಮಡಿಕೇರಿ, ಡಿ. 18: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ದಿನೇ ದಿನೇ ರಾಜಕೀಯ ಬೆಳವಣಿಗೆಗಳು ಪ್ರಚಾರದ ಭರಾಟೆ ಹೆಚ್ಚಾಗುತ್ತಿವೆ. ಸ್ಥಳೀಯ ಸರಕಾರ ಎಂದೇ ಪ್ರತಿಬಿಂಬಿತ ವಾಗಿರುವ ಗ್ರಾಮ ಪಂಚಾಯಿತಿಗಳ ಮೂಲಕವೇ ಭವಿಷ್ಯದ ರಾಜಕೀಯ ಏಳು - ಬೀಳುಗಳೂ ಅವಲಂಬಿತ ವಾಗಿರುವ ಹಿನ್ನೆಲೆಯಲ್ಲಿ ಈ ಚುನಾವಣೆ ಭಾರೀ ಮಹತ್ವವನ್ನು ಹೊಂದಿವೆ.ಆದರೆ ಇದು ರಾಜಕೀಯ ಪಕ್ಷಗಳ ಚಿಹ್ನೆಯಡಿಯಲ್ಲಿನ ಚುನಾವಣೆ ಅಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ತೆರೆಮರೆಯಲ್ಲಿ ನಡೆಯುವದು ಮಾತ್ರ ರಾಜಕೀಯ ಸಮರವೇ ಆಗಿದೆ. ಬಹುತೇಕ ಎಲ್ಲಾ ಪಂಚಾಯಿತಿಗಳಿಗೂ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವದರಿಂದ ಇದೂ ಕೂಡ ಪರೋಕ್ಷ ರೀತಿಯಲ್ಲಿ ಪಕ್ಷಗಳ ಆಧಾರಿತ ಚುನಾವಣೆಯಾಗಿಯೇ ಜಿದ್ದಾಜಿದ್ದಿನಿಂದ ಕೂಡಿರುತ್ತದೆ.ಈಗಾಗಲೇ ಬಹುತೇಕ ಎಲ್ಲಾ ಪಕ್ಷಗಳ ಪ್ರಮುಖರ ದಂಡು ಗ್ರಾಮೀಣ ವಿಭಾಗದಲ್ಲೇ ಕಂಡು ಬರುತ್ತಿವೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಭಾರೀ ಕಸರತ್ತು ನಡೆಸುತ್ತಿದ್ದರೆ, ಎಸ್‍ಡಿಪಿಐ ಪಕ್ಷದ ಅಭ್ಯರ್ಥಿಗಳೂ ಹಲವೆಡೆ ಸ್ಪರ್ಧೆಯಲ್ಲಿದ್ದಾರೆ. ಇವರೊಂದಿಗೆ ಕೆಲವರು ಸ್ವತಂತ್ರವಾಗಿ ಕಣದಲ್ಲಿದ್ದು, ಮತದಾನದ ದಿನ ಸಮೀಪಿಸುತ್ತಿ ರುವಂತೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳೂ ಹೆಚ್ಚಾಗುತ್ತಿವೆ. ಜಿಲ್ಲೆಯ ಒಟ್ಟು 101 ಪಂಚಾಯಿತಿಗಳ ಸ್ಥಾನಕ್ಕೆ ಈ ಬಾರಿ ಚುನಾವಣೆ ನಡೆಯುತ್ತಿದೆ.ತಮ್ಮ ಪಕ್ಷಗಳಿಗೇ ಬೆಂಬಲ : ಅಧ್ಯಕ್ಷರ ನಿರೀಕ್ಷೆ ಈ ಚುನಾವಣೆಗೆ ಸಂಬಂಧಿಸಿ ದಂತೆ ತಮ್ಮ ಪಕ್ಷಗಳಿಗೇ ಜನಬೆಂಬಲ ಸಿಗಲಿದೆ ಎಂದು ವಿವಿಧ ಪಕ್ಷಗಳ ಅಧ್ಯಕ್ಷರುಗಳು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್, ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಹಾಗೂ ಎಸ್‍ಡಿಪಿಐ ಅಧ್ಯಕ್ಷ ಮನ್ಸೂರ್ ಅವರುಗಳು ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ.

ಬಹುತೇಕ ಪಂಚಾಯತ್‍ನಲ್ಲಿ ಬಿಜೆಪಿ

ಜಿಲ್ಲೆಯ 101 ಗ್ರಾ.ಪಂ.ಗಳ 1202 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಎಲ್ಲಾ ಪಂಚಾಯಿತಿಗಳ ಎಲ್ಲಾ ಸ್ಥಾನಕ್ಕೂ ಪಕ್ಷದ ಬೆಂಬಲಿತರು ಸ್ಪರ್ಧಿಸಿದ್ದಾರೆ. ಬಹುತೇಕ ಪಂಚಾಯಿತಿಗಳಲ್ಲಿ ಅಧಿಕಾರವನ್ನು ಹಿಡಿಯುತ್ತೇವೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ಹೇಳಿದರು. ಬಿಜೆಪಿ ಸರಕಾರದ ಸಾಧನೆ - ಜನಪರ ಕೆಲಸಗಳಿಗೆ ಜನರು ಬೆಂಬಲಿಸು ತ್ತಾರೆಂದು ಅವರು ಹೇಳಿದರು.

ಬಿಜೆಪಿಗಿಂತ ಮೇಲುಗೈ : ಕಾಂಗ್ರೆಸ್

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಬಿಜೆಪಿ ಪಕ್ಷಕ್ಕಿಂತ ಮೇಲುಗೈ ಸಾಧಿಸಲಿದೆ. ಶೇ. 99 ರಷ್ಟು ಕಡೆ ಪಕ್ಷದ ಬೆಂಬಲಿತರು ಸ್ಪರ್ಧೆಯಲ್ಲಿದ್ದು, ಖಂಡಿತವಾಗಿಯೂ ಹೆಚ್ಚು ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಹೇಳಿದರು. ಪಕ್ಷ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವ್ಯವಸ್ಥಿತ ರೀತಿಯಲ್ಲಿ ಚುನಾವಣೆ ಎದುರಿಸುತ್ತಿರು ವದಾಗಿ ಅವರು ಹೇಳಿದರು.

ಜೆಡಿಎಸ್‍ನಲ್ಲಿ ಉತ್ಸಾಹ

ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ 38 ಸದಸ್ಯರು ಚುನಾಯಿತರಾಗಿದ್ದರು. ಈ ಬಾರಿ ಸುಮಾರು 150 ರಿಂದ 200 ಸದಸ್ಯರು ಜೆಡಿಎಸ್ ಬೆಂಬಲಿತರಾಗಿ ಜಯಗಳಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಹೇಳಿದರು. ಕುಮಾರಸ್ವಾಮಿ ಅವರ ಅಭಿವೃದ್ಧಿ ಯೋಜನೆಗಳು, ಜನಪರ ನಿಲುವು, ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದೇ ವರ್ಷದಲ್ಲಿ 7 ಬಾರಿ ಜಿಲ್ಲೆಗೆ ಭೇಟಿ ನೀಡಿದ್ದು, ಇಂತಹ ಕಾರಣದಿಂದ ಜನರು ಪಕ್ಷದ ಬೆಂಬಲಿತರನ್ನು ಆಯ್ಕೆಮಾಡಲಿದ್ದಾರೆ ಎಂದ ಅವರು ಬಿ.ಎ. ಜೀವಿಜಯ ಅವರು ಪಕ್ಷ ತೊರೆದಿದ್ದು, ಯಾವದೇ ಧಕ್ಕೆಯಾಗದು ಎಂದರು. ಜೆಡಿಎಸ್‍ನ ಬೆಂಬಲಿತರು 868 ಸ್ಥಾನದಲ್ಲಿ ಸ್ಪರ್ಧೆಯಲ್ಲಿರುವದಾಗಿ ಅವರು ತಿಳಿಸಿದರು.

(ಮೊದಲ ಪುಟದಿಂದ)

ಎಸ್‍ಡಿಪಿಐ ಬೆಂಬಲಿತರಾಗಿ 40 ಮಂದಿ

ಎಸ್‍ಡಿಪಿಐ ಪಕ್ಷ ಈ ಬಾರಿ ಎಲ್ಲಾ ಪಂಚಾಯಿತಿಗಳಲ್ಲಿ ಸ್ಪರ್ಧೆ ಮಾಡಿಲ್ಲ. ಸುಂಟಿಕೊಪ್ಪ, ಸಿದ್ದಾಪುರ, ಎಮ್ಮೆಮಾಡು, ತಣ್ಣೀರುಹಳ್ಳ, ಗರಗಂದೂರು ಸೇರಿ ಹಲವೆಡೆ 40 ಮಂದಿಯನ್ನು ಬೆಂಬಲಿಸಿ ಕಣಕ್ಕಿಳಿಸಿದೆ. ಇವರಲ್ಲಿ ಶೇ. 60 ರಷ್ಟು ಮಂದಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಎಸ್‍ಡಿಪಿಐ ಅಧ್ಯಕ್ಷ ಮನ್ಸೂರ್ ಅಭಿಪ್ರಾಯಪಟ್ಟರು.