ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರವೇಶ ನಿರ್ಬಂಧ

ಮಂಗಳೂರು, ಡಿ. 17: ಈ ಬಾರಿಯ ಸುಬ್ರಹ್ಮಣ್ಯ ಷಷ್ಠಿಯಂದು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಭಕ್ತಾದಿಗಳಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಪ್ರತೀ ವರ್ಷ ವಿಜೃಂಭಣೆಯಿಂದ ಜರುಗುತ್ತಿದ್ದ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಈ ಬಾರಿ ಕೋವಿಡ್ ಹಿನ್ನೆಲೆ ಸರಳವಾಗಿ ಜರುಗಲಿದ್ದು, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಳ್ಳುವುದರಿಂದ ವಂಚಿತರಾಗಲಿದ್ದಾರೆ. ಇಂದಿನಿಂದ ಪ್ರಾರಂಭಗೊಂಡ ಉತ್ಸವ ತಾ. 20 ರವರೆಗೆ ನಡೆಯಲಿದ್ದು ಹೆಚ್ಚಿನ ಜನಸಂದಣಿ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಸಿಐಡಿ ಡಿವೈಎಸ್‍ಪಿ ಲಕ್ಷ್ಮೀ ಆತ್ಮಹತ್ಯೆ

ಬೆಂಗಳೂರು, ಡಿ. 17: ನಗರದ ಮಹಿಳಾ ಪೆÇಲೀಸ್ ಅಧಿಕಾರಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿದೆ. ಅನ್ನಪೂರ್ಣೇಶ್ವರಿ ನಗರದ ವಿನಾಯಕ್ ಲೇಔಟ್‍ನಲ್ಲಿ ಸಿಐಡಿ ಡಿವೈಎಸ್‍ಪಿ ಲಕ್ಷ್ಮೀ (33) ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬುಧವಾರ ಸಂಜೆ 7 ರ ಸುಮಾರಿಗೆ ಲಕ್ಷ್ಮೀ ಅವರು ತಮ್ಮ ಸ್ನೇಹಿತನಾದ ಗುತ್ತಿಗೆದಾರ ಮನು ಎಂಬವರ ಮನೆಯಲ್ಲಿ ಪಾರ್ಟಿ ಮಾಡಿ, ಅಲ್ಲಿಯೇ ಕೋಣೆಯೊಂದಕ್ಕೆ ತೆರಳಿದ್ದರು. ಸುಮಾರು ಹೊತ್ತು ಹೊರಗೆ ಬಾರದ ಹಿನ್ನೆಲೆ 10 ಗಂಟೆಗೆ ಮನು ಅವರು ಬಾಗಿಲು ತೆರೆದು ನೋಡಿದಾಗ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಮೂಲತಃ ಲಕ್ಷ್ಮೀ ಕೋಲಾರದವರಾಗಿದ್ದು, ನಗರದ ಕೋಣನಕುಂಟೆಯಲ್ಲಿ ವಾಸವಾಗಿದ್ದರು. ವಿವಾಹವಾಗಿ 8 ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಹೀಗಾಗಿಯೇ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗಳು ಲಕ್ಷ್ಮೀ ಸಾವಿನ ಬಗ್ಗೆ ಸಂಶಯವಿದ್ದು, ಆಕೆಯ ಸ್ನೇಹಿತರಾದ ಮನು ಹಾಗೂ ಪ್ರಜ್ವಲ್ ಮೇಲೆ ಅನುಮಾನವಿದೆ ಎಂದು ಸಿಐಡಿ ಡಿವೈಎಸ್‍ಪಿ ಆಗಿದ್ದ ಲಕ್ಷ್ಮೀ ಅವರ ತಂದೆ ವೆಂಕಟೇಶ್ ಆರೋಪಿಸಿದ್ದಾರೆ.

ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಅಮೃತಸರ್, ಡಿ. 17: ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಇಬ್ಬರು ಶಂಕಿತ ಉಗ್ರರನ್ನು ಭಾರತೀಯ ಸೇನೆ ಗುರುವಾರ ಹೊಡೆದುರುಳಿಸಿದೆ. ಗಡಿ ಭದ್ರತಾ ಪಡೆಯ (ಬಿಎಸ್‍ಎಫ್) ಯೋಧರು ಗುರುವಾರ ಮುಂಜಾನೆ ಪಂಜಾಬ್‍ನ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಇಂದು ಮುಂಜಾನೆ 2.30 ರ ಸುಮಾರಿಗೆ ಅಟಾರಿಯ ಮುಂಭಾಗದಲ್ಲಿ ಶಸ್ತ್ರಸಜ್ಜಿತವಾಗಿ ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸೈನಿಕರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶೋಧ ನಡೆಸಿದ ಯೋಧರು ಘಟನಾ ಸ್ಥಳದಲ್ಲಿ ಒಂದು ಎಕೆ 56 ರೈಫಲ್, 61 ಸುತ್ತಿನ ಸಡೀವ ಗುಂಡುಗಳ 2 ಮ್ಯಾಗಜಿನ್, ಒಂದು ಮ್ಯಾಗ್ನಮ್ ರೈಫಲ್ ಮತ್ತು 29 ಸುತ್ತಿನ ಗುಂಡುಗಳು, ಒಂದು ಪಿಸ್ತೂಲ್ ಮತ್ತು ಎರಡು ಮ್ಯಾಗಜಿನ್‍ಗಳು, 2 ಪಿವಿಸಿ ಪೈಪ್‍ಗಳು, ಪಾಕಿಸ್ತಾನದ 30 ರೂ.ಗಳ ನೋಟುಗಳನ್ನು ಸೇನೆ ವಶಕ್ಕೆ ಪಡೆದಿದೆ.

ಬಾಬ್ರಿ ಮಸೀದಿಗೆ ಬದಲೀ ಮಸೀದಿ

ಅಯೋಧ್ಯೆ, ಡಿ. 17: ಬಾಬ್ರಿ ಮಸೀದಿಗೆ ಬದಲಿಯಾಗಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ನೀಲನಕ್ಷೆ ಸಿದ್ಧವಾಗುತ್ತಿದ್ದು, ಇದೇ ಶನಿವಾರ ಅನಾವರಣಗೊಳ್ಳಲಿದೆ. ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮುಂದಿನ ತಿಂಗಳು ಜನವರಿಯ ಗಣರಾಜ್ಯೋತ್ಸವ ದಿನ ನೆರವೇರಲಿದೆ ಎಂದು ಮಸೀದಿ ನಿರ್ಮಾಣದ ಟ್ರಸ್ಟ್ ತಿಳಿಸಿದೆ. ಬಾಬ್ರಿ ಮಸೀದಿಗೆ ಬದಲಾಗಿ ನಿರ್ಮಿಸಲಿರುವ ಮಸೀದಿಗೆ ಅಯೋಧ್ಯೆಯಲ್ಲಿ 5 ಎಕರೆ ಜಮೀನನ್ನು ಮೀಸಲಿಡಲಾಗಿದ್ದು, 7 ದಶಕಗಳ ಹಿಂದೆ ಜಾರಿಗೆ ಬಂದ ಭಾರತದ ಸಂವಿಧಾನದ ದಿನವೇ ಶಂಕುಸ್ಥಾಪನೆ ನೆರವೇರಲಿದೆ. ನಮ್ಮ ಸಂವಿಧಾನ ಬಹುತ್ವವನ್ನು ಆಧಾರವಾಗಿಟ್ಟುಕೊಂಡಿದೆ, ಹೀಗಾಗಿ ಅದೇ ದಿನ ಶಂಕುಸ್ಥಾಪನೆ ನೆರವೇರಲಿದೆ ಎಂದು ಇಂಡೊ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಅತರ್ ಹುಸೇನ್ ತಿಳಿಸಿದ್ದಾರೆ.