ಸೋಮವಾರಪೇಟೆ,ಡಿ.17: ತಾಲೂಕಿನ ಹಟ್ಟಿಹೊಳೆ ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರ ಸಾರ್ವಜನಿಕರ ಆರೋಗ್ಯ ಸೇವೆಯಿಂದ ದೂರ ಉಳಿದಿದೆ. ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ವ್ಯಾಪ್ತಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ಈ ಉಪಕೇಂದ್ರ ಕಳೆದ ಎರಡು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪುತ್ತಿದ್ದು, ಸರ್ಕಾರದ ಯೋಜನೆಯೊಂದು ಪಾಳುಬೀಳುತ್ತಿದೆ.

ಹಟ್ಟಿಹೊಳೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು, ಬಡವರ್ಗದ ಮಂದಿಯೇ ಹೆಚ್ಚಿದ್ದು, ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾದರೂ ಮಾದಾಪುರ ಅಥವಾ ಮಡಿಕೇರಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಟ್ಟಿಹೊಳೆಯಲ್ಲಿಯೇ ಲಕ್ಷಾಂತರ ರೂಪಾಯಿ ವ್ಯಯಿಸಿ ಸರ್ಕಾರದಿಂದ ಆರೋಗ್ಯ ಉಪ ಕೇಂದ್ರ ನಿರ್ಮಿಸಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ಇಲ್ಲಿಗೆ ಯಾವ ವೈದ್ಯರೂ ಬರುವುದಿಲ್ಲ. ಓರ್ವ ನರ್ಸ್ ಮಾತ್ರ ಆಗೊಮ್ಮೆ ಈಗೊಮ್ಮೆ ಬಂದು ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಿ ಹಿಂತಿರುಗುವುದನ್ನು ಹೊರತುಪಡಿಸಿದರೆ ಮಿಕ್ಕಂತೆ ಆರೋಗ್ಯ ಸೇವೆ ಜನರಿಂದ ದೂರವೇ ಉಳಿದಿದೆ.

ಹಟ್ಟಿಹೊಳೆ ಆರೋಗ್ಯ ಉಪ ಕೇಂದ್ರಕ್ಕೆ ಸಂಬಂಧಿಸಿದಂತೆ ಮುಕ್ಕೋಡ್ಲು, ಆವಂಡಿ, ಕಾಂಡನಕೊಲ್ಲಿ, ಹಾಲೇರಿ, ಹೊದಕಾನ, ಸೇರಿದಂತೆ ಇತರ ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು ವಾಸವಿದ್ದು, ಬಹುತೇಕ ಮಂದಿ ಬಡ ಕಾರ್ಮಿಕರಾಗಿದ್ದಾರೆ. ಇವರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ಬಸ್, ಜೀಪ್, ಆಟೋಗಳಲ್ಲಿ ಮಾದಾಪುರ ಅಥವಾ ಮಡಿಕೇರಿ ಆಸ್ಪತ್ರೆಗೆ ತೆರಳಬೇಕಿದೆ. ಆಟೋದಲ್ಲಿ ಮಾದಾಪುರಕ್ಕೆ ತೆರಳಬೇಕಾದರೆ 80 ರೂಪಾಯಿ ಕೊಡಬೇಕು. ಕೂಲಿ ಕಾರ್ಮಿಕರಿಗೆ ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಅಬ್ದುಲ್ಲ ತಿಳಿಸಿದ್ದಾರೆ.

ಇಲ್ಲಿರುವ ಆರೋಗ್ಯ ಉಪ ಕೇಂದ್ರ ಪಾಳು ಬೀಳುತ್ತಿದೆ. ಸುತ್ತಲೂ ಗಿಡಗಂಟಿಗಳು ಬೆಳೆದು ಇಡೀ ಆವರಣ ಕಾಡಿನಂತಾಗುತ್ತಿದೆ. ಈ ಹಿಂದೆ ಮಂಗಳವಾರದಂದು ನರ್ಸ್ ಬರುತ್ತಿದ್ದರು. ಆದರೆ ಯಾವದೇ ಚಿಕಿತ್ಸೆ ಸಿಗುತ್ತಿರಲಿಲ್ಲ. ಶುಶ್ರೂಷಕಿ, ಆಶಾ ಕಾರ್ಯಕರ್ತೆಯರು ಮಕ್ಕಳು, ಗರ್ಭಿಣಿಯರಿಗೆ ಲಸಿಕೆ, ಇಂಜೆಕ್ಷನ್ ಇದ್ದರೆ ಮಾತ್ರ ಬರುತ್ತಾರೆ. ವೈದ್ಯರು ಬರುವುದಿಲ್ಲ. ಸುಸಜ್ಜಿತ ಕಟ್ಟಡ, ವಸತಿ ಗೃಹವಿದ್ದರೂ ಬಳಕೆಯಾಗುತ್ತಿಲ್ಲ ಎಂದು ಸ್ಥಳೀಯರಾದ ತಂಗಮ್ಮ ಹೇಳುತ್ತಾರೆ.

ಒಟ್ಟಾರೆ ಲಕ್ಷಾಂತರ ರೂಪಾಯಿ ವ್ಯಯಿಸಿ ಸಾರ್ವಜನಿಕರ ಆರೋಗ್ಯ ಸೇವೆಗೆಂದು ಹಟ್ಟಿಹೊಳೆಯಲ್ಲಿ ನಿರ್ಮಿಸಿದ ಆರೋಗ್ಯ ಉಪ ಕೇಂದ್ರ ಸೂಕ್ತ ನಿರ್ವಹಣೆ ಕೊರತೆ, ವೈದ್ಯರು/ಶುಶ್ರೂಷಕಿಯರ ಅಲಭ್ಯತೆಯಿಂದಾಗಿ ಸಾರ್ವಜನಿಕ ಸೇವೆಯಿಂದ ದೂರ ಉಳಿದಿದೆ. ತಕ್ಷಣ ಕೇಂದ್ರದ ದುರಸ್ತಿಕಾರ್ಯ ಕೈಗೊಂಡು ವಾರಕ್ಕೊಮ್ಮೆಯಾದರೂ ವೈದ್ಯರು ಲಭ್ಯವಿರುವಂತೆ ಮಾಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ವಾರಕ್ಕೊಮ್ಮೆ ವೈದ್ಯರ ಹಾಜರಾತಿಗೆ ಕ್ರಮ

ಹಟ್ಟಿಹೊಳೆ ಆರೋಗ್ಯ ಉಪಕೇಂದ್ರದ ‘ಅನಾರೋಗ್ಯ’ದ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಅವರನ್ನು ‘ಶಕ್ತಿ’ ಗಮನ ಸೆಳೆದ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ವಾರಕ್ಕೆ ಒಂದು ದಿನ ಹಟ್ಟಿಹೊಳೆ ಆರೋಗ್ಯ ಉಪಕೇಂದ್ರಕ್ಕೆ ವೈದ್ಯರನ್ನು ನಿಯೋಜಿಸಲು ಕ್ರಮ ವಹಿಸಲಾಗುವದು ಎಂದು ಭರವಸೆ ನೀಡಿದ್ದಾರೆ.

ಪ್ರಾಕೃತಿಕ ವಿಕೋಪ ಸಂದರ್ಭ ಆರೋಗ್ಯ ಉಪಕೇಂದ್ರದ ಹಿಂಬದಿ ಅಪಾಯಕಾರಿ ಸ್ಥಿತಿಗೆ ತಲುಪಿರುವ ಹಿನ್ನೆಲೆ ಇದನ್ನು ದುರಸ್ತಿಗೊಳಿಸುವಂತೆ ಇಲಾಖೆಯ ಇಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಆದರೆ ಕೊರೊನಾ ಹಿನ್ನೆಲೆ ದುರಸ್ತಿ ಕಾರ್ಯ ನಡೆದಿಲ್ಲ. ಹಟ್ಟಿಹೊಳೆ ವ್ಯಾಪ್ತಿಯಲ್ಲಿ ಶುಶ್ರೂಷಕಿಯೋರ್ವರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ವಸತಿ ಗೃಹದಲ್ಲಿ ನೆಲೆಸುತ್ತಿಲ್ಲ. ಮಾದಾಪುರದಿಂದ ತೆರಳುತ್ತಿದ್ದಾರೆ. ಉಪಕೇಂದ್ರ ಮತ್ತು ವಸತಿ ಗೃಹವನ್ನು ತಕ್ಷಣಕ್ಕೆ ದುರಸ್ತಿಗೊಳಿಸಿ ಶುಕ್ರವಾರ ಅಥವಾ ಶನಿವಾರದಂದು ವೈದ್ಯರು ಲಭ್ಯರಿರುವಂತೆ ವ್ಯವಸ್ಥೆ ಮಾಡಲಾಗುವದು ಎಂದು ಡಾ. ಶ್ರೀನಿವಾಸ್ ತಿಳಿಸಿದ್ದಾರೆ. - ವಿಜಯ್ ಹಾನಗಲ್