ಕೂಡಿಗೆ, ಡಿ. 17: ಎಲಕನೂರು-ಹೊಸಹಳ್ಳಿ ಸಮೀಪದ ಅರಣ್ಯದಂಚಿನಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಕಕ್ಕೆ ಹೊಳೆ ಇಂದಿನವರೆಗೂ ಈ ಭಾಗದ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುತ್ತಾ ಬಂದಿದೆ. ಭತ್ತದ ಬೇಸಾಯ ಮಾಡಲು ಅನುಕೂಲಕರವಾಗಿದೆ.

ಅಣೆಕಟ್ಟೆಯಿಂದ ಬರುವ ಮುಖ್ಯ ನಾಲೆಯ ಉಪ ನಾಲೆಯು ಕಳೆದ 25 ವರ್ಷಗಳಿಂದ ಹೂಳು ತುಂಬಿ ಮುಚ್ಚಿಕೊಂಡಿದೆ. ಕಳೆದ ಸಾಲಿನಲ್ಲಿ ಈ ಭಾಗದಲ್ಲಿ ಹೆಚ್ಚು ಮಳೆಯಿಂದಾಗಿ ಬೆಟ್ಟದ ಕಡೆಗಳಿಂದ ಬಂದ ನೀರು ಸಹ ಹೋಗಲು ಕಾಲುವೆ ಇಲ್ಲದೆ ಕೆಳ ಭಾಗದಲ್ಲಿನÀ ರೈತರು ಬೆಳೆದ ಬೆಳೆಗಳು ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದವು. ಮಳೆಹಾನಿಗೆ ಪರಿಹಾರ ನೀಡುವ ಸಂಬಂಧ ಸ್ಥಳ ಪರಿಶೀಲನೆಗೆ ಶಾಸಕ ಅಪ್ಪಚ್ಚು ರಂಜನ್ ಅವರು ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭ ಕಾಲುವೆಯಲ್ಲಿ ಹೂಳು ತುಂಬಿದ್ದು ಗಮನಕ್ಕೆ ಬಂದ ತಕ್ಷಣವೇ ಕಾಮಗಾರಿಯನ್ನು ಪ್ರಾರಂಭ ಮಾಡುವಂತೆ ಸಣ್ಣ ನೀರಾವರಿ ಅಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ಇದೀಗ ಕಕ್ಕೆ ಹೊಳೆ ಅಣೆಕಟ್ಟೆಯಿಂದ ಹತ್ತು ಕಿಲೋಮೀಟರ್ ದೂರದವರೆಗೆ ಮುಖ್ಯ ನಾಲೆಯ ಹೂಳು ತೆಗೆಯುವಿಕೆ ಮತ್ತು ರಸ್ತೆಯ ಅಗಲೀಕರÀಣದ ಕಾಮಗಾರಿಯು ಬರದಿಂದ ಸಾಗುತ್ತಿದೆ.

ಈ ಕಾಮಗಾರಿಯು ಅಣೆಕಟ್ಟೆಯಿಂದ ಸೀಗೆಹೊಸೂರು ಗ್ರಾಮದ ಮೂಲಕ ಭುವನಗಿರಿ ಮಾರ್ಗವಾಗಿ ಕಣಿವೆ ಸಮೀಪದ ಕಲ್ಲುಕೆರೆಯವರೆಗೆ ನಡೆಯುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕ್ರಿಯಾ ಯೋಜನೆಯನ್ನು ತಯಾರಿಸಿದ್ದು, ಹತ್ತು ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ಈ ಭಾಗದ ನೂರಾರು ರೈತರ ಜಮೀನಿನ ಬೇಸಾಯಕ್ಕೆ ಅನುಕೂಲವಾಗುವಂತೆ ಮಾಡಲು ನೂತನ ಮಾದರಿಯ ಕಾಂಕ್ರಿಟ್ ಚರಂಡಿ ಮತ್ತು ಪಂಪ್ ಅಳವಡಿಸುವಿಕೆ ಕಾರ್ಯ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಮುಖ್ಯ ನಾಲೆಗೆ ಕಳೆದ ಮೂರು ವರ್ಷಗಳ ಹಿಂದೆ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‍ಫಾರ್‍ಮರ್‍ಗಳನ್ನು ನಿಲ್ಲಿಸಲಾಗಿದೆ. ಇದೀಗ ನಾಲೆಯ ಕಾಮಗಾರಿಯು ನಡೆಯುತ್ತಿರುವದರಿಂದ ವಿದ್ಯುತ್ ಇಲಾಖೆಯವರು ಇವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿಕೊಡುವುದರ ಮೂಲಕ ನಾಲೆಯ ಹೂಳು ತೆಗೆಯುವಿಕೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಲಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.