ಮಡಿಕೇರಿ, ಡಿ. 14: ಪ್ರಕೃತಿ ವಿಕೋಪ, ಸಂಚಾರ ನಿಯಂತ್ರಣ ಮತ್ತಿತರ ತುರ್ತು ಸಂದರ್ಭಗಳಲ್ಲಿ ಪೊಲೀಸರೊಂದಿಗೆ ಬೆನ್ನುಲುಬಾಗಿ ಗೃಹ ರಕ್ಷಕರು ಕರ್ತವ್ಯ ನಿರ್ವಹಿಸುವುದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹೇಳಿದರು.

ಕೊಡಗು ಜಿಲ್ಲಾ ಗೃಹರಕ್ಷಕ ದಳ ವತಿಯಿಂದ ನಗರದ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ನಡೆದ ಗೃಹರಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೃಹರಕ್ಷಕರು ಯಾವುದೇ ಪ್ರತಿಫಲಾಫೇಕ್ಷೆಯಿಲ್ಲದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮೆಚ್ಚುವಂತದ್ದು ಎಂದು ಅವರು ನುಡಿದರು.

ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಮಾತನಾಡಿ, ಹಲವು ಸಂದಿಗ್ಧ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿರುವುದು ಗೃಹರಕ್ಷಕರ ಜಾಣ್ಮೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರು ಹಾಗೂ ಪೊಲೀಸ್ ಉಪ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 9 ಗೃಹ ರಕ್ಷಕ ಘಟಕಗಳಿದ್ದು, 500 ಹೋಂ ಗಾರ್ಡ್ ಹುದ್ದೆಯಲ್ಲಿ 252 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

19 ರಿಂದ 60 ವರ್ಷದೊಳಗಿ ನವರು ಗೃಹ ರಕ್ಷಕರ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ ಎಂದರು

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್. ಮಚ್ಚಾಡೋ ಮಾತನಾಡಿ. ಕೊಡಗು ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಗೃಹರಕ್ಷಕರು ಟ್ರಾಫಿಕ್ ನಿರ್ವಹಣೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಧ್ವಜ ವಂದನೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಡಿವೈಎಸ್‍ಪಿಗಳಾದ ಸಿ.ಟಿ. ಜಯಕುಮಾರ್ (ವೀರಾಜಪೇಟೆ), ಎಚ್.ಎಂ. ಶೈಲೇಂದ್ರ (ಸೋಮವಾರ ಪೇಟೆ), ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ರಾಮರೆಡ್ಡಿ ಇತರರು ಇದ್ದರು. ಹೋಂ ಗಾರ್ಡ್ ವಿಭಾಗದ ಲಕ್ಷ್ಮಿ ಪ್ರಾರ್ಥಿಸಿದರು. ಫಾರೂಕ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.