ಕೂಡಿಗೆ, ಡಿ. 14 : ತೊರೆನೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಸಂಘದ ಅಧ್ಯಕ್ಷ ಟಿ.ಟಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು

ಹಾಸನ ಹಾಲು ಒಕ್ಕೂಟ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ ಹಾಲಿ ಇರುವ ಕಟ್ಟಡವನ್ನು ನವೀಕರಣಗೊಳಿಸಿ ನಂತರ ಕಟ್ಟಡದ ಮೇಲ್ ಅಂತಸ್ತಿನ ಕಾಮಗಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಗೆ ಪತ್ರವ್ಯವಹಾರ ಮಾಡುವಂತೆ ತೀರ್ಮಾನ ತೆಗೆದುಕೊಳ್ಳಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ. ಕೆ.ಎಸ್. ಕೃಷ್ಣಗೌಡ ಮಾತನಾಡಿ, ಸಹಕಾರ ಸಂಘಗಳ ಪ್ರಗತಿಗೆ ಸದಸ್ಯರ ಸಹಕಾರ ಮುಖ್ಯವಾಗಿರುತ್ತದೆ. ಈ ಭಾಗದ ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಲು ಸಹಕಾರ ಸಂಘದ ಮೂಲಕ ವಿಶೇಷ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಅದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ, ಸಂಘದ ಸದಸ್ಯರು ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕಬೇಕು. ಅಲ್ಲದೆ ಒಕ್ಕೂಟದ ವತಿಯಿಂದ ಪಶುಗಳ ತಪಾಸಣಾ ವ್ಯವಸ್ಥೆ ನಡೆಯಲಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಸಂಘದ ಆಡಿಟ್ ವರದಿಯನ್ನು ಕಾರ್ಯದರ್ಶಿ ಶಿವರಾಜ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಟಿ.ಜಿ. ರಾಮಸ್ವಾಮಿ, ನಿರ್ದೇಶಕರಾದ ಉದಯಕುಮಾರ್ ಟಿ.ಟಿ. ಕುಮಾರ್, ಕುಮಾರ ಸ್ವಾಮಿ, ನಾಗರಾಜ್, ನಾರಾಯಣ, ಪುಟ್ಟಸ್ವಾಮಿ, ಚಿಕ್ಕಯ್ಯ, ಕುಮಾರಿ ಸೇರಿದಂತೆ ಕಾರ್ಯದರ್ಶಿ ಶಿವರಾಜ್ ಹಾಜರಿದ್ದರು.