ಪಾಲಿಬೆಟ್ಟ, ಡಿ. 14: ಕ್ರೀಡಾ ಮನೋಭಾವದ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದ್ದು ಯುವ ಪ್ರತಿಭೆಗಳಿಗೆ ಪೆÇ್ರೀತ್ಸಾಹಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಸಮಿತಿಯ ಸ್ಥಾಪಕ ಅಧ್ಯಕ್ಷ ಎ .ಎಸ್ ಮುಸ್ತಫಾ ಅಭಿಪ್ರಾಯಿಸಿದ್ದಾರೆ.

ಚೆನ್ನಯ್ಯನಕೋಟೆ ಗ್ರಾಮದಲ್ಲಿ ಜ. 9ರಿಂದ 11ರ ವರಗೆ ನಡೆಯುವ ಫ್ರೀಡಂ ಬಾಯ್ಸ್ ಪ್ರೀಮಿಯರ್ ಲೀಗ್ (ಎಂಸಿಪಿಎಲ್) ಸೀಸನ್2 ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಕಾರ್ಯಕ್ರಮಕ್ಕೆ ರೋಚಸ್ ಹಾಲ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಮೈದಾನದ ಕೊರತೆ ನಡುವೆ ಅದೆಷ್ಟೋ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಗ್ರಾಮೀಣ ಮಟ್ಟದಲ್ಲಿರುವ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಕೊರತೆ ನಡುವೆ ಆಟದ ಮೈದಾನದ ವ್ಯವಸ್ಥೆಯೂ ಇಲ್ಲದೆ ಕ್ರೀಡೆಯಿಂದ ವಂಚಿತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೌಹಾರ್ದತೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕ್ರೀಡೆ ಸಹಕಾರಿಯಾಗಿದ್ದು, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವ ಫ್ರೀಡಂ ಬಾಯ್ಸ್ ಸಂಘದ ಕಾರ್ಯವನ್ನು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಚೀಟಿ ಎತ್ತುವ ಮೂಲಕ ಚಾಲನೆ ನೀಡಿದರು. ಫ್ರೀಡಂ ಬಾಯ್ಸ್ ಸಂಘಟನೆಯ ಎಂಸಿಪಿಎಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ಸಮೀರ್ ಮಾತನಾಡಿ, 188 ಆಟಗಾರರನ್ನೊಳಗೊಂಡ 12 ತಂಡಗಳು ಭಾಗವಹಿಸಲಿವೆ.

ಸಹರಾ ಹೊಲಮಾಳ, ಟೀಮ್ ಕೂಲ್ ಹೊಲಮಾಳ, ಕಿಂಗ್ಸ್ ಮಾಲ್ದಾರೆ, ಎಂ ಎಸ್ ಇ ಮಾಲ್ದಾರೆ, ರೋರಿಂಗ್ ಲಯನ್ಸ್ ಮಾರ್ಗೊಲ್ಲಿ, ಎ .ಕೆ ಗ್ರೂಪ್ ಹುಂಡಿ, ಎಂ. ಎಫ್ ಟಿ ಮಾಲ್ದಾರೆ, ರಿಯಲ್ ಫೈಟರ್ ಹುಂಡಿ, ಎಂ.ಎಚ್ ಫ್ರೆಂಡ್ಸ್ ಹುಂಡಿ,ರೇಸಿಂಗ್ ಸ್ಟಾರ್ ಹೊಲಮಾಳ, ಸಿತಾರ ಮಾರ್ಗೊಲ್ಲಿ, ಫ್ಲೆಕ್ಸಿ ಹೊಲಮಾಳ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಂಘಟನೆಯ ಸದಸ್ಯ ಶಾಫಿ ಮಾತನಾಡಿ ಕ್ರಿಕೆಟ್ ಪಂದ್ಯಾವಳಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು ವಿಜೇತ ಪ್ರಥಮ ತಂಡಕ್ಕೆ ರೂ.33, 333ಹಾಗೂ ದ್ವಿತೀಯ ತಂಡಕ್ಕೆ ರೂ 22,222 ನಗದು ಹಾಗೂ ಅತ್ಯುತ್ತಮ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದರು.

ಸಾಗರ್ ಯುವಕ ಸಂಘದ ಪ್ರಮುಖ ರದೀಶ್, ಸಂಘಟನೆಯ ಅಧ್ಯಕ್ಷ ಸೈಫುದ್ದೀನ್, ಉಪಾಧ್ಯಕ್ಷ ರಫೀಕ್, ಕಾರ್ಯದರ್ಶಿ ಶಿಹಾಬ್, ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಸದಸ್ಯ ವಿಜು, ಮಾಲ್ದಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ರಜಾಕ್, ನೀಯಾಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿನು, ಮಾಲ್ದಾರೆ ಮುತ್ತಪ್ಪ ಕಲಾ ತಂಡದ ಅಧ್ಯಕ್ಷ ಸಾಜಿ, ಗ್ರಾಮದ ಪ್ರಮುಖ ಯೋಗೀಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.