ಮಡಿಕೇರಿ, ಡಿ. 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ದುಡಿಯುತ್ತಿರುವ ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಿ, ಸರಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ನಿನ್ನೆಯಿಂದ ಸಾರಿಗೆ ನಿಗಮದ ಚಾಲಕರು ಹಾಗೂ ನಿರ್ವಾಹಕರು ಹಮ್ಮಿಕೊಂಡಿರುವ ಮುಷ್ಕರ ಇಂದು ಕೂಡ ಮುಂದುವರೆಯಿತು.
ಇಲ್ಲಿನ ಸರಕಾರಿ ಬಸ್ ನಿಲ್ದಾಣ ದಲ್ಲಿ ಬಸ್‍ಗಳನ್ನು ನಿಲ್ಲಿಸಿ ಮುಷ್ಕರ ಮುಂದುವರೆಸಿದ ಪ್ರತಿಭಟನಾಕಾರರು ಸರಕಾರ ತಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರಲ್ಲದೆ, ಮಾಧ್ಯಮಗಳೆದುರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರಕಾರಿ ಬಸ್‍ಗಳು ಸಂಚರಿಸದ ಕಾರಣ ಇಂದೂ ಕೂಡ ಪ್ರಯಾಣಿಕರು ಪರದಾಡುವಂತಾಗಿತ್ತು.
ವೀರಾಜಪೇಟೆ ವರದಿ
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಸರ್ಕಾರಿ ಬಸ್‍ಗಳಿಲ್ಲದೆ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಯಿತು.
ಮೈಸೂರು, ಬೆಂಗಳೂರು ಕಡೆ ಪ್ರಯಾಣಿಸುವ ಪ್ರಯಾಣಿಕರು ಅನಿವಾರ್ಯವಾಗಿ ದುಬಾರಿ ಹಣ ನೀಡಿ ಖಾಸಗಿ, ಬಾಡಿಗೆ ವಾಹನಗಳ ಮೊರೆ ಹೋಗಬೇಕಾಯಿತು.
ಸಾರಿಗೆ ಬಸ್‍ಗಳ ಮೂಲಕ ಮೈಸೂರಿನಿಂದ ಪ್ರತಿದಿನ ಬರುವ ಹೂವುಗಳು ತಲುಪದೆ ಹೂ ವ್ಯಾಪಾರಿಗಳಿಗೆ ತೊಂದರೆ ಆಯಿತು. ಮುಂಗಡ ಹಣ ಪಡೆದುಕೊಂಡು ಹೂವುಗಳು ಸಕಾಲದಲ್ಲಿ ಬಾರದ ಕಾರಣ ದುಬಾರಿ ಬಾಡಿಗೆ ನೀಡಿ ತರಿಸಿ ಸಮಾರಂಭಗಳಿಗೆ ತಲುಪಿಸಬೇಕಾ ಯಿತು ಎಂದು ಗಡಿಯಾರ ಕಂಬದ ಬಳಿ ಹಲವು ವರ್ಷದಿಂದ ಹೂ ವ್ಯಾಪಾರ ನಡೆಸುತ್ತಿರುವ ಜಬಿ ಪತ್ರಿಕೆಗೆ ಮಾಹಿತಿ ನೀಡಿದರು.