ಸೋವವಾರಪೇಟೆ, ಡಿ. 13: ಸಮೀಪದ ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ, ಅಧ್ಯಕ್ಷ ಬಿ.ಎ. ಧರ್ಮಪ್ಪ ಅಧ್ಯಕ್ಷತೆಯಲ್ಲಿ ಶ್ರೀ ಕುಮಾರ ಲಿಂಗೇಶ್ವರ ಸಮುದಾಯಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಬಿ.ಎ ಧರ್ಮಪ್ಪ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 29 ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 8 ಲಾಭಾಂಶ ವಿತರಿಸಲಾಗುವುದು.
ಸಂಘವನ್ನು ಬೆಳೆಸುವ ನಿಟ್ಟಿನಲ್ಲಿ ಸದಸ್ಯರೆಲ್ಲರೂ, ಸಂಘದಲ್ಲಿಯೇ ವ್ಯವಹಾರ ಮಾಡುವ ಮೂಲಕ ತಾವೂ ಸಹ ಆರ್ಥಿಕವಾಗಿ ಸಬಲರಾಗಬೇಕೆಂದು ಮನವಿ ಮಾಡಿದರು.
ತಾವು ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರು ಪಾವತಿಸಿದಲ್ಲಿ ಮತ್ತೊಮ್ಮೆ ಸಾಲವನ್ನು ಪಡೆಯಲು ಅವಕಾಶ ಇದ್ದು, ಎಲ್ಲರೂ ಸಹಕಾರ ಸಂಘದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಇದೇ ಸಂದರ್ಭ 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರಾದ ಕೆ.ಕೆ. ಗೋಪಾಲ, ಯು.ಕೆ. ದೇಶ್‍ರಾಜ್, ಕೆ.ಎಸ್. ದಿನೇಶ್, ಯು.ಎಂ. ಬಸವರಾಜು, ಜಿ.ಎಚ್. ರಾಜೇಶ್, ಬಿ.ಈ. ಜಯೇಂದ್ರ, ಬಿ.ಎನ್. ಸೋಮಶೇಖರ್, ಬಿ.ಪಿ. ನಾರಾಯಣಪೂಜಾರಿ, ಪಿ.ಎಸ್. ಅರುಣ್, ಕೆ.ಎಸ್. ಚಂದ್ರಾವತಿ, ಕೆ.ಪಿ. ಗೌರಮ್ಮ, ಟಿ.ಆರ್. ಪವನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಪಿ. ಜೋಯಪ್ಪ ಉಪಸ್ಥಿತರಿದ್ದರು.