ಚೆಟ್ಟಳ್ಳಿ, ಡಿ. 13: ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆಬದಿ ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಅಬ್ಬಿಯಾಲದಲ್ಲಿ ಕಡಗದಾಳು ಗ್ರಾಮಕ್ಕೆ ಒಳಪಟ್ಟ ವ್ಯಕ್ತಿಯೊಬ್ಬರು ಪಿಕ್ಅಪ್ ವಾಹನದಲ್ಲಿ ತಮ್ಮ ಮನೆಯ ತ್ಯಾಜ್ಯಗಳನ್ನು ತಂದು ಸುರಿದು ಹೋಗಿದ್ದರು. ಈ ತ್ಯಾಜ್ಯವು ರಸ್ತೆಬದಿ ಮತ್ತು ಅಲ್ಲಿನ ಖಾಸಗಿ ವ್ಯಕ್ತಿಯೊಬ್ಬರ ತೋಟಕ್ಕೂ ಸುರಿಯಲ್ಪಟ್ಟಿತು. ತೋಟದ ಮಾಲೀಕರು ಚೆಟ್ಟಳ್ಳಿ ಪಂಚಾಯಿಗೆ ಆಗಮಿಸಿ ದೂರನ್ನು ಕೊಟ್ಟಿದ್ದರು. ಆದರೆ ಏನು ಪ್ರಯೋಜನ ಆಗಿರಲಿಲ್ಲ. ಕಸ ಸುರಿದ ವ್ಯಕ್ತಿಯ ಪತ್ತೆ ಕಷ್ಟ ಸಾಧ್ಯವಾಗಿತ್ತು.
ಅದೇ ರಸ್ತೆಯಲ್ಲಿ ಚೆಟ್ಟಳ್ಳಿಯ ಕಾಫಿ ಬೆಳೆಗಾರ ಹಾಗೂ ಪತ್ರಕರ್ತ ಪುತ್ತರಿರ ಪಪ್ಪು ತಿಮ್ಮಯ್ಯ ತೆರಳುವಾಗ ಈ ಕಸದ ರಾಶಿ ಅವರ ಗಮನಕ್ಕೆ ಬಂದಿದೆ. ತಮ್ಮ ವಾಹನವನ್ನು ನಿಲ್ಲಿಸಿ ಕಸದ ರಾಶಿಯನ್ನು ಪರಿಶೀಲಿಸಿದಾಗ ತ್ಯಾಜ್ಯಗಳ ಮದ್ಯದಲ್ಲಿ ಬೊಳ್ಳಮ್ಮ ಎಂಬ ಹೆಸರಿನ ಗುರುತಿನ ಚೀಟಿ ಲಭಿಸಿದೆ. ಅದರ ಆಧಾರದಲ್ಲಿ ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ತ್ಯಾಜ್ಯವನ್ನು ಸಂಜೆಯೊಳಗಡೆ ತೆರವುಗೊಳಿಸುವುದಾಗಿ ಒಪ್ಪಿಕೊಂಡರು. ಚೆಟ್ಟಳ್ಳಿ ಪಿ.ಡಿ.ಓ. ನಂದೀಶ್ಕುಮಾರ್ ಸಮ್ಮುಖದಲ್ಲಿ ಪಂಚಾಯಿತಿಗೆ 1000 ರೂಪಾಯಿಯ ದಂಡ ತೆತ್ತು ತ್ಯಾಜ್ಯವನ್ನು ತೆರವುಗೊಳಿಸಿದರು.
ಈ ಸಂದರ್ಭ ಪುತ್ತರಿರ ಪಪ್ಪು ತಿಮ್ಮಯ್ಯ, ಪಂಚಾಯಿತಿ ಪ್ರಬಾರ ಕಾರ್ಯದರ್ಶಿ ಚಂದ್ರ, ಡೆನ್ನಿ ಬರೋಸ್, ಸುಲೋಚನಾ, ನೌಕರ ಕಂದಸ್ವಾಮಿ ಹಾಜರಿದ್ದರು.