ಮಡಿಕೇರಿ, ಡಿ. 13: ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಮುಖರು ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಜಗದೀಶ್ ಅವರನ್ನು ಬೆಂಗಳೂರಿನ ಕಾಫಿ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಭೇಟಿ ಮಾಡಿ ಕಾಫಿ ಬೆಳೆಗಾರರ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಿದರು.

ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕಾಫಿ ಉದ್ಯಮದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಕಾಫಿ ಮಂಡಳಿಯ ಕಾರ್ಯದರ್ಶಿಯ ಗಮನಸೆಳೆಯಲಾಯಿತು. ಬಹುಮುಖ್ಯವಾಗಿ ಹಲವಾರು ವರ್ಷಗಳಿಂದ ವಿವಿಧ ಸಮಸ್ಯೆಗಳಿಂದ ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರಿಗೆ ಕಾಫಿ ಮಂಡಳಿಯ ಶಿಫಾರಸ್ಸಿನ ಆಧಾರದಲ್ಲಿ ಆರ್ಥಿಕ ಪುನಶ್ಚೇತನ ದೊರಕಿಸಿಕೊಡುವಂತೆ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ಮುಂಬರುವ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಕೊಯ್ಲು ಪೂರ್ವದ ಚಟುವಟಿಕೆಗಳಿಗೆ ಅವಶ್ಯಕವಾಗಿ ಬೇಕಾದ ಯಂತ್ರೋಪಕರಣಗಳನ್ನು ಪರಿಚಯಿಸಿ, ಸ್ಥಳೀಯ ಸಂಘಟನೆಗಳ ಮೂಲಕ ಬೆಳೆಗಾರರಿಗೆ ಸೇವೆ ನೀಡುವ ಮಹತ್ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಕಾಫಿ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಜಗದೀಶ್ ಭರವಸೆ ನೀಡಿದರು. ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ಹಾಜರಿದ್ದರು.