ಶನಿವಾರಸಂತೆ, ಡಿ. 12: ಸಮೀಪದ ಗೋಪಾಲಪುರ ಗ್ರಾಮ ದಲ್ಲಿ 6 ತಿಂಗಳಿನಿಂದ ತಿರುಗಾಡುತ್ತಾ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ಮಾನಸಿಕ ಅಸ್ವಸ್ಥರಾಗಿರುವ ಅನಾಥ ಮಹಿಳೆ (56)ಯನ್ನು ರಕ್ಷಿಸಿ ಬೆಂಗಳೂರಿನ ಆಟೋ ರಾಜ್ಯ ಸಂಸ್ಥೆ ಆಶ್ರಮಕ್ಕೆ ಸೇರಿಸುವ ಮೂಲಕ ಕರವೇ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ.

ಶನಿವಾರಸಂತೆ - ಸೋಮವಾರ ಪೇಟೆ ರಾಜ್ಯ ಹೆದ್ದಾರಿಯಲ್ಲಿ ಗೋಪಾಲಪುರದಲ್ಲಿ ಅಸಭ್ಯ ರೀತಿಯಲ್ಲಿ ಬಟ್ಟೆ ಧರಿಸಿ, ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದ ಮಹಿಳೆಯ ಬಗ್ಗೆ ಪೊಲೀಸ್ ಸಿಬ್ಬಂದಿಯೊಬ್ಬರು ಕರವೇ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಕಾರ್ಯಕರ್ತರು ಪೊಲೀಸ್ ಇಲಾಖೆಯಿಂದ ಪತ್ರ ಪಡೆದು ಮಡಿಕೇರಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ತಜ್ಞ ಡೇವಿಡ್ ಅವರನ್ನು ಸಂಪರ್ಕಿಸಿದರು. ಅವರ ಸಲಹೆಯಂತೆ ಕೊರೊನಾ ಪರೀಕ್ಷೆ ಮಾಡುವ ಸಂಚಾರಿ ವಾಹನದ ಸಿಬ್ಬಂದಿ ಮಹೇಶ್ ಅವರಿಂದ ಮಹಿಳೆಯನ್ನು ಪರೀಕ್ಷಿಸಿ ನೆಗೆಟಿವ್ ಫಲಿತಾಂಶ ಪಡೆದರು. ನಂತರ ಮಾನಸಿಕ ತಜ್ಞ ಡೇವಿಡ್ ಅವರು ಶನಿವಾರಸಂತೆಯ ಪಿಎಸ್‍ಐ ಎಚ್.ಈ. ದೇವರಾಜ್ ನೀಡಿದ ಪತ್ರದ ನೆರವಿನಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ಆದೇಶಿಸಿದರು. ಸಿಬ್ಬಂದಿ ಶಿವಕುಮಾರ್ ಮತ್ತು ತಂಡದವರು ಮಡಿಕೇರಿಯಿಂದ ಗೋಪಾಲಪುರ ಗ್ರಾಮಕ್ಕೆ ಮಹಿಳೆಯನ್ನು ಅಂಬುಲೆನ್ಸ್‍ನಲ್ಲಿ ಕರೆದೊಯ್ದು ಬೆಂಗಳೂರಿನ ಆಟೋರಾಜ ಸಂಸ್ಥೆ ಆಶ್ರಮಕ್ಕೆ ಸೇರಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ತಜ್ಞ ಡೇವಿಡ್ ಹಾಗೂ ಅಧಿಕಾರಿ ಶಿವಕುಮಾರ್, ಕೊರೊನಾ ಪರೀಕ್ಷಕ ಮಹೇಶ್, ಸಿಬ್ಬಂದಿ ಹಾಗೂ ಕರವೇಯ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಆನಂದ್, ಸದಸ್ಯ ರಂಜಿತ್ ಬಗ್ಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.