ಗೋಣಿಕೊಪ್ಪಲು, ಡಿ. 12: ಶತಮಾನಗಳಿಂದಲೂ ದೂಪದಕೊಲ್ಲಿ ಪೈಸಾರಿಯಲ್ಲಿ ವಾಸಿಸುತ್ತಿರುವ ತಮಗೆ ಇಲ್ಲಿಯ ತನಕ ಮೂಲಭೂತ ಸೌಕರ್ಯಗಳಲ್ಲಿ ಅತ್ಯಾವಶ್ಯಕವಿರುವ ರಸ್ತೆ ಮಾರ್ಗ ಸರಿ ಇಲ್ಲದ್ದನ್ನು ಮನಗಂಡ ಗ್ರಾಮಸ್ಥರು, ಮಕ್ಕಳು, ಮಹಿಳೆಯರಾದಿಯಾಗಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಪದಕೊಲ್ಲಿ ಪೈಸಾರಿ ನಿವಾಸಿಗಳು ಮುಂಜಾನೆಯೇ ಗ್ರಾಮದಲ್ಲಿ ಸಭೆ ಸೇರಿ, ಮುಖ್ಯ ರಸ್ತೆಯ ಹೆಬ್ಬಾಗಿಲಿನಲ್ಲಿ ‘ಮತ ಬಹಿಷ್ಕಾರ’ ಬ್ಯಾನರ್ ಅಳವಡಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಈ ಪೈಸಾರಿಯಲ್ಲಿ ಪರಿಶಿಷ್ಟ ಜಾತಿ,ಪಂಗಡ ಸೇರಿದಂತೆ ಹಲವು ಸಮುದಾಯದ 45 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಗ್ರಾಮದಿಂದ ಮುಖ್ಯ ರಸ್ತೆಗೆ ತೆರಳಲು ಇರುವ ಅರ್ಧ ಕಿ.ಮೀ. ದೂರದ ರಸ್ತೆಯು ಮಣ್ಣಿನಿಂದ ಕೂಡಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಈ ರಸ್ತೆಯಲ್ಲಿ ನಡೆದುಕೊಂಡು ತೆರಳಲು ಸಾಧ್ಯವಾಗುವುದಿಲ್ಲ. ಇದರಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಾರಿ ತೊಂದರೆ ಆಗುತ್ತಿದ್ದು ಶಾಲೆಗೆ ತೆರಳದೆ ಮನೆಯಲ್ಲಿಯೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗೆ ಒಳಗಾದವರನ್ನು ಈ ಮಾರ್ಗದಿಂದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತದಾನ ಮಾಡುವ ಮೂಲಕ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ್ದೇವೆ. ಆದರೆ ಆರಿಸಿ ಹೋದ ಜನಪ್ರತಿನಿಧಿಗಳಿಗೆ ಇಲ್ಲಿಯ ನಿವಾಸಿಗಳಿಗೆ ಅವಶ್ಯವಿರುವ ರಸ್ತೆಯನ್ನು ಕಲ್ಪಿಸಲು ಇಲ್ಲಿಯ ತನಕ ಸಾಧ್ಯವಾಗಿಲ್ಲ. ಹಲವು ಬಾರಿ ಈ ಬಗ್ಗೆ ಸಭೆ ಸೇರಿದ ಪೈಸಾರಿ ನಿವಾಸಿಗಳು ಅಂತಿಮವಾಗಿ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರ ನೀಡುವ ಪ್ರಯತ್ನವನ್ನು ಮಾಡಿದ್ದೇವೆಂದು ಗ್ರಾಮದ ಮುಖಂಡರಾದ ಹೆಚ್.ಎಂ. ರಾಜಣ್ಣ, ಪಿ.ಎ. ಸುನೀಲ್ ತಿಳಿಸಿದರು. ಗ್ರಾಮದ ವಿದ್ಯಾವಂತ ಯುವಕ ಪಿ.ಎಸ್. ತಿರುಶ್ ಮಾತನಾಡಿ, ಬಹುಮುಖ್ಯವಾದ ಚುನಾವಣೆಯ ಮತ ಹಕ್ಕನ್ನು ಬಹಿಷ್ಕರಿಸಬಾರದು ಎಂದು ನಾವು ತಿಳಿದಿದ್ದೇವೆ. ಆದರೆ ಇದೀಗ ಮತ ಬಹಿಷ್ಕಾರದಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ಉದ್ದೇಶದಿಂದ ಗ್ರಾಮದ ಜನರ ಒಟ್ಟಾಭಿಪ್ರಾಯದಂತೆ ನಿರ್ಧಾರ ಕೈಗೊಂಡಿದ್ದೇವೆ. ತಾಲೂಕು ತಹಶೀಲ್ದಾರರು ಈ ಬಗ್ಗೆ ಗ್ರಾಮಕ್ಕೆ ಆಗಮಿಸಿ ಇಲ್ಲಿಯ ಜನರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಮತ ಬಹಿಷ್ಕಾರದ ತೀರ್ಮಾನವನ್ನು ಹಿಂದಕ್ಕೆ ಪಡೆಯುತ್ತೇವೆ. ತಾಲೂಕಾಡಳಿತ, ಜಿಲ್ಲಾಡಳಿತ ಈ ಬಗ್ಗೆ ವಿಶೇಷ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಗ್ರಾಮದ ಹಿರಿಯ ಮಹಿಳೆ ಎಂ.ಕೆ. ಲಕ್ಷ್ಮಿ ಮಾತನಾಡಿ, ಅನಾದಿಕಾಲದಿಂದಲೂ ಸರ್ಕಾರ ನೀಡಿರುವ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದೇವೆ. ಈ ಭಾಗದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದ ಸಂದರ್ಭ ಯಾವುದೇ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅನೇಕ ಸಾವು ನೋವು ಸಂಭವಿಸಿದ ಉದಾಹರಣೆಗಳಿವೆ ಎಂದರು. ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ಸುಬ್ರಮಣಿ, ಎಂ.ಆರ್.ಮಾದೇಶ್ ವೈ.ಬಿ.ಗಣೇಶ್, ಪಿ.ಎಸ್.ಗುರುರಾಜ್, ಪಿ.ಜೆ.ಮಣಿ, ಪಿ.ಎ.ಮಂಜುನಾಥ್, ಪಳನಿಸ್ವಾಮಿ, ಪಿ.ಬಿ.ರಾಮಚಂದ್ರ, ಸೇರಿದಂತೆ ಇನ್ನಿತರರು ಹಾಜರಿದ್ದರು.

-ಹೆಚ್.ಕೆ.ಜಗದೀಶ್