ಮಡಿಕೇರಿ, ಡಿ. 12: ಗಿರಿಜನರು ಬದುಕಿನೊಂದಿಗೆ ಕಲೆಯನ್ನು ಕರಗತ ಮಾಡಿಕೊಂಡು ಪ್ರಕೃತಿಯನ್ನು ಪ್ರೀತಿಸಬೇಕೆಂದು ಗಿರಿಜನ ಮುಖಂಡ ಜೆ.ಬಿ. ರಮೇಶ ಕರೆ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವೀರಾಜಪೇಟೆ ತಾಲೂಕು ಬೊಮ್ಮಾಡು ಗಿರಿಜನ ಹಾಡಿಯಲ್ಲಿ ನಡೆದ ಗಿರಿಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು; ಸರ್ಕಾರದಿಂದ ಗಿರಿಜನರಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ನಮ್ಮ ಕಲೆಗಳಾದ ಯರವರು, ಜೇನುಕುರುಬರು, ಪಣಿಯರು ಮತ್ತು ನಾನಾ ಉಪಜಾತಿಯ ಕಲೆಗಳನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು.

ಅರಣ್ಯದ ಮೂಲ ನಿವಾಸಿಗಳಾಗಿ ಮೂಲ ಬದುಕನ್ನು ಅಳವಡಿಸಿಕೊಂಡಿದ್ದೇವೆ. ಇವತ್ತು ನಾವೆಲ್ಲರೂ ಶಿಕ್ಷಣವನ್ನು ಪಡೆಯಬೇಕು. ಆ ಮೂಲಕ ಸಮಾಜದ ಉತ್ತಮ ನಾಗರಿಕರಾಗಿ ಸೇವೆ ಮಾಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಗಿರಿಜನ ಮುಖಂಡ ಜೆ.ಆರ್. ರಾಮು ಗಿರಿಜನ ಕಲೆಯನ್ನು ಪ್ರದರ್ಶನ ಮಾಡುತ್ತಿರುವುದು ಒಳ್ಳೆಯದು ಎಂದರು.

ಬ್ರಹ್ಮಗಿರಿ ಹಾಡಿಯ ಅರಣ್ಯ ಹಕ್ಕುಗಳ ಸಮಿತಿ ಕಾರ್ಯದರ್ಶಿ ಅರಣ್ಯದೊಂದಿಗೆ ಬದುಕುವುದರ ಜತೆಗೆ ಅರಣ್ಯವನ್ನು ಕಾಪಾಡಬೇಕು ಎಂದರು. ಪ್ರಾಸ್ತಾವಿಕ ನುಡಿಯಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ನಾಡು-ನುಡಿ ಹಾಗೂ ಗಿರಿಜನರಲ್ಲಿ ಅಡಗಿರುವ ಕಲೆಯನ್ನು ಬಾಹ್ಯ ಪ್ರಪಂಚಕ್ಕೆ ಪ್ರದರ್ಶಿಸಲು ಇಲಾಖೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಯರವರ ನೃತ್ಯ, ಕೋಲಾಟ, ಗಿರಿಜನ ಹಾಡುಗಳು ಪಣಿಯರ ಕೋಲಾಟ, ಕಂಸಾಳೆ, ಡೊಳ್ಳು ಕುಣಿತ ಮುಂತಾದ ಜನಪದ ಕಲೆಗಳ ಪ್ರದರ್ಶನಗಳು ಜನಮನ ರಂಜಿಸಿತು. ಮಣಜೂರು ಮಂಜುನಾಥ್ ಸ್ವಾಗತಿಸಿ, ವಂದಿಸಿದರು.