ಮಡಿಕೇರಿ, ಡಿ. 13: ಪುಟ್ಟ ಬಾಲಕನೋರ್ವ ತನ್ನ ಎಳೆಯ ವಯಸ್ಸಿನಲ್ಲೇ ತೋರುತ್ತಿರುವ ಅಪ್ರತಿಮ ಪ್ರತಿಭೆಗೆ ಈತನಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡಿನಲ್ಲಿ ಸ್ಥಾನ ಲಭಿಸಿದೆ. ಈತ ಬಾಳೆಲೆಯ ಅಡ್ಡೇಂಗಡ ಪ್ರಶಾಂತ್ ತಿಮ್ಮಯ್ಯ ಹಾಗೂ ಕೃಪಾ (ತಾಮನೆ - ಬೊಜ್ಜಂಗಡ) ದಂಪತಿಯ ಪುತ್ರ. ಐದು ವರ್ಷ ಎಂಟು ತಿಂಗಳ ಪ್ರಾಯದ ಅಡ್ಡೇಂಗಡ ಸಾಮ್ರಾಟ್ ಬೋಪಣ್ಣನದ್ದು ಎಲ್ಲರೂ ಮೂಗಿನ ಮೇಲೆ ಬೆರಳನ್ನಿಡುವಂತಹ ಪ್ರತಿಭೆ. ಹಲವಾರು ವಿಭಾಗದಲ್ಲಿ ಈತ ಭಾರೀ ಚೂಟಿಯಾಗಿದ್ದಾನೆ. ಈತನ ಈ ಚುರುಕುತನ ಹಾಗೂ ತೋರುತ್ತಿರುವ ಪ್ರತಿಭೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಮ ನ್ನಣೆ ನೀಡಿ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕವನ್ನು ನೀಡಿ ದಾಖಲು ಮಾಡಿಕೊಂಡಿದೆ.ಕೊಡವ, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಈ ನಾಲ್ಕು ಭಾಷೆಯಲ್ಲಿ ಸಾಮ್ರಾಟ್ ಎಳೆ ಪ್ರಾಯದಲ್ಲೇ ಹಿಡಿತ ಸಾಧಿಸಿದ್ದಾನೆ. ಪ್ಲೇ ಹೋಂ ಹಾಗೂ ಎಲ್‍ಕೆಜಿಗೆ ಹೋಗುತ್ತಿದ್ದನಾದರೂ ಈ ಬಾರಿ ಕೊರೊನಾ ಕಾರಣದಿಂದಾಗಿ ಮನೆಯಲ್ಲೇ ಉಳಿದು ತಾಯಿ ಕೃಪಾಳ ಗರಡಿಯಲ್ಲಿ ಪಳಗಿದ್ದಾನೆ. ಈತನ ವಿವಿಧ ರೀತಿಯ ಪ್ರತಿಭೆಗಳನ್ನು ಪ್ರತಿಬಿಂಬಿಸುವ ಸುಮಾರು 23ಕ್ಕೂ ಅಧಿಕ ವೀಡಿಯೋಗಳು ಯೂಟ್ಯೂಬ್‍ನಲ್ಲಿ ಗಮನ ಸೆಳೆಯುತ್ತಿವೆ. ಸುಮಾರು 161ಕ್ಕೂ ಅಧಿಕ ಜನರಲ್ ನಾಲೇಜ್ (ಸಾಮಾನ್ಯ ಜ್ಞಾನ) ಪ್ರಶ್ನೆಗಳಿಗೆ ಈತ ಪಟ ಪಟನೆ ಉತ್ತರ ನೀಡುತ್ತಾನೆ. (ಮೊದಲ ಪುಟದಿಂದ) 10 ಶ್ಲೋಕಗಳನ್ನು ಹೇಳುವದರಲ್ಲೂ ಈತ ಪ್ರವೀಣತ. ದೇಶದ ಎಲ್ಲಾ ರಾಜ್ಯಗಳ ರಾಜಧಾನಿಯ ಹೆಸರು, ವಿವಿಧ ರಾಷ್ಟ್ರಗಳ ಕರೆನ್ಸಿಯ ಹೆಸರು, ಸ್ವಾತಂತ್ರ್ಯೋತ್ಸವ, ಆಯುಧ ಪೂಜೆ, ಕ್ರಿಸ್‍ಮಸ್, ದೀಪಾವಳಿ ಈ ರೀತಿಯಾಗಿ ಸುಮಾರು 25 ಪ್ರಮುಖ ದಿನಗಳ ಹೆಸರು ಹಾಗೂ ಇತÀರ ಮಾಹಿತಿ ಪ್ರಾಣಿ - ಪಕ್ಷಿಗಳ ಕುರಿತಾದ ವಿವರದ ಮೂಲಕ ಸಾಮ್ರಾಟ್ ಅಚ್ಚರಿ ಮೂಡಿಸುತ್ತಾನೆ.

1 ರಿಂದ 20ರವರೆಗಿನ ಮಗ್ಗಿಯನ್ನು 3.22 ಸೆಕೆಂಡ್ಸ್‍ನಲ್ಲಿ ಪಟಪಟನೆ ಹೇಳುತ್ತಾನೆ. ಕನ್ನಡ ವರ್ಣಮಾಲೆಯನುಗುಣವಾಗಿ ಗಾದೆ ಹೇಳುವದು, ಭಗತ್‍ಸಿಂಗ್, ಲಾಲ್‍ಬಹದ್ದೂರ್ ಶಾಸ್ತ್ರಿ ಅವರಂತಹ ರಾಷ್ಟ್ರನಾಯಕರ ವಿಚಾರವಾಗಿ ಮಾತನಾಡುವದನ್ನು ಈತ ಅಭ್ಯಸಿಸಿದ್ದಾನೆ, ಇದರೊಂದಿಗೆ ಕೊಡವ ಕೋವಿ ಹಕ್ಕು, ಪ್ರಮುಖ ಹಬ್ಬಗಳಾದ ಕೈಲ್‍ಪೊಳ್ದ್, ಕಾವೇರಿ ಸಂಕ್ರಮಣ, ಪುತ್ತರಿಯ ಕುರಿತು ಮಾತನಾಡಿರುವಂತಹ ವೀಡಿಯೋ ಗಳನ್ನು ಆಧರಿಸಿ ಈತನಿಗೆ ಎಳೆ ಪ್ರಾಯದಲ್ಲೇ ಈ ಗೌರವ ದೊರೆತಿರುವದು ವಿಶೇಷವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಯಿ ಕೃಪಾ ಈತನಿಗೆ ತಾನೇ ಮನೆಯಲ್ಲಿ ಮಾರ್ಗದರ್ಶನ ನೀಡುತ್ತಿರುವದಾಗಿ ಪ್ರತಿಕ್ರಿಯಿಸಿದರು.

-ಶಶಿ