ಡಾ. ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ
ಉಡುಪಿ, ಡಿ. 13: ನಾಡಿನ ಪ್ರಮುಖ ಹಿರಿಯ ವಿದ್ವಾಂಸ, ವಾಗ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ. ಬನ್ನಂಜೆ ಗೋವಿಂದಾಚಾರ್ಯ ಭಾನುವಾರ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ತೀವ್ರ ಅನಾರೋಗ್ಯ ಕಾಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿರುವ ಸ್ವಗೃಹದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. 84 ವರ್ಷದ ಬನ್ನಂಜೆ ಗೋವಿಂದಾಚಾರ್ಯರು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ ಇತ್ತೀಚೆಗೆ ನಿಧನರಾಗಿದ್ದರು. ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದವರಾದ ಡಾ. ಬನ್ನಂಜೆ ಮಾಧ್ವ ತತ್ವದಲ್ಲಿ ವಿಶೇಷ ಪಾಂಡಿತ್ಯ, ಕನ್ನಡ ಮತ್ತು ಸಂಸ್ಕøತ ಭಾಷೆಯಲ್ಲಿ ಜ್ಞಾನ ಹೊಂದಿದ್ದರು. ಅನೇಕ ಕೃತಿಗಳನ್ನು, ವ್ಯಾಖ್ಯಾನಗಳು, ಅನುವಾದಗಳನ್ನು ರಚಿಸಿದ್ದರು. ಭಾರತೀಯ ತತ್ವಶಾಸ್ತ್ರ, ಹಿಂದೂ ಧರ್ಮಗ್ರಂಥಗಳಲ್ಲಿ ಪ್ರವಚನ ನೀಡುವ ಸಲುವಾಗಿ ದೇಶ-ವಿದೇಶಗಳಲ್ಲಿ ಸಂಚಾರ ಮಾಡಿದ್ದರು. ಸಂಸ್ಕøತ ವ್ಯಾಖ್ಯಾಯನ ಎಂಬ ಸುಮಾರು 4 ಸಾವಿರ ಪುಟಗಳ ಸಮಗ್ರ ಕೃತಿ, ಸುಮಾರು 150 ಪುಸ್ತಕಗಳನ್ನು ಬರೆದಿದ್ದಾರೆ. ಗೋವಿಂದಾಚಾರ್ಯ ಅವರ ಕಿರಿಯ ಪುತ್ರ ವಿಜಯಭೂಷಣ ಆಚಾರ್ಯ ಕಳೆದ ಡಿಸೆಂಬರ್ 2 ರಂದು ತೀರಿಕೊಂಡಿದ್ದು, ಇಂದು ಅವರ 12ನೇ ದಿನದ ವಿಧಿವಿಧಾನ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಅದೇ ದಿನವೇ ಗೋವಿಂದಾಚಾರ್ಯ ಅವರು ಕೊನೆಯುಸಿರೆಳೆದಿದ್ದಾರೆ.
ಗ್ರಾ.ಪಂ. ಚುನಾವಣೆಯಲ್ಲಿ ರಾಜಕೀಯ ಬೇಡ
ಬೆಂಗಳೂರು, ಡಿ. 13: ರಾಜ್ಯದಲ್ಲಿ ಇದೇ 22 ಮತ್ತು 27 ರಂದು ಎರಡು ಹಂತಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಹೆಚ್ಚಾಗುತ್ತಿರುವುದನ್ನು ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಸಂಪ್ರದಾಯಗಳನ್ನು ಗಾಳಿಗೆ ತೂರಿ ಪಕ್ಷದ ನೆಲೆಯಲ್ಲಿ ಸಭೆ, ಸಮಾರಂಭಗಳನ್ನು ನಡೆಸಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ರಾಜಕೀಯಗೊಳಿಸುತ್ತಿರುವ ಹಿನ್ನೆಲೆ ಆಯೋಗ ಗರಂ ಆಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು, ರಾಜಕೀಯದಿಂದ ಪಂಚಾಯಿತಿಗಳನ್ನು ಮುಕ್ತಗೊಳಿಸಬೇಕು. ಇಂತಹ ಕಲುಷಿತ ವಾತಾವರಣವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಂತೆ ರಾಜ್ಯ ಚುನಾವಣಾ ಆಯೋಗ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.
ರೈತರ ಮುಷ್ಕರ ಹಿನ್ನೆಲೆ ಸಭೆ
ನವದೆಹಲಿ, ಡಿ. 13: ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿರುವಾಗಲೇ, ಕೇಂದ್ರ ಗೃಹ ಸಚಿವರೊಂದಿಗೆ ತೋಮರ್ ಹಾಗೂ ಸೋಮ್ ಪ್ರಕಾಶ್ ಅವರು ಮಹತ್ವದ ಸಭೆ ನಡೆಸಿದ್ದಾರೆ. ಸಚಿವರೊಂದಿಗೆ ಪಂಜಾಬ್‍ನ ಬಿಜೆಪಿ ನಾಯಕರೂ ಸಹ ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಸಚಿವರಾದ ಪಿಯೂಷ್ ಗೋಯಲ್, ತೋಮರ್, ಪ್ರಕಾಶ್ ಅವರು ಪ್ರತಿಭಟನೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ರೈತರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ, ಅದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆದಿದೆ.
ಗುಂಡಿನ ದಾಳಿ : ಇಬ್ಬರು ನಕ್ಸಲರ ಸಾವು
ಭುವನೇಶ್ವರ, ಡಿ. 13: ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಸ್ವಾಭಿಮಾನ್ ಪ್ರದೇಶದ ಸಿಂಗ್ರಾಮ್ ಗ್ರಾಮದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಮುಖ ನಕ್ಸಲರು ಹತರಾಗಿದ್ದಾರೆ. ಗುಂಡಿನ ಚಕಮಕಿ ನಂತರ ಭದ್ರತಾ ಸಿಬ್ಬಂದಿ ಒಂದು ಇನ್ಸಾಫ್ ರೈಫಲ್, ಒಂದು ಎಸ್‍ಎಲ್‍ಆರ್, 20 ಸುತ್ತು ಮದ್ದು ಗುಂಡುಗಳು, ನಕ್ಸಲರ ಮೂರು ಚೀಲಗಳು ಮತ್ತಿತರ ಸ್ಫೋಟಕ ವಸ್ತುಗಳನ್ನು ಘಟನಾ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಒಡಿಶಾ ಡಿಜಿಪಿ ಅಭಯ್ ತಿಳಿಸಿದ್ದಾರೆ. ಭಾನುವಾರ ಮುಂಜಾನೆ 3.30 ರಿಂದ 4 ಗಂಟೆಯ ನಡುವೆ ಮಲ್ಕನ್‍ಗಿರಿ ಜಿಲ್ಲೆಯ ಜೋಧಂಬೊ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ವಿಶೇಷ ಕಾರ್ಯಾಚರಣೆ ತಂಡ (ಎಸ್‍ಒಜಿ) ಪೊಲೀಸ್ ಠಾಣೆಯ ಗಜಲ್‍ಮಾಮುಡಿ ಪಂಚಾಯತ್‍ನ ಸಿಂಗರಂ-ಟೆಂಟಾಪಲ್ಲಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತ್ತು ಎಂದು ಡಿಜಿಪಿ ತಿಳಿಸಿದ್ದಾರೆ.