ಸೋಮವಾರಪೇಟೆ,ಡಿ.13: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭವಾಗಿ 100 ವರ್ಷಗಳನ್ನು ಪೂರೈಸಿದ್ದು, ಪ್ರಗತಿಪಥದತ್ತ ಸಾಗುತ್ತಿದೆ. 2019-20ನೇ ಸಾಲಿಗೆ 80.65ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 16 ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ಹೇಳಿದರು.
ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರಿಗೆ ಕೆಪಿಸಿ ಸಾಲವನ್ನು ರೂ.75 ಸಾವಿರದಿಂದ 95 ಸಾವಿರಕ್ಕೆ ಹೆಚ್ಚಿಸಲಾಗಿದೆ. ಜಾಮೀನು ಸಾಲ ವಿಮಾ ಯೋಜನೆಯಲ್ಲಿ 2019-20ನೇ ಸಾಲಿನಲ್ಲಿ ಮೃತರಾದ 9 ಸದಸ್ಯರುಗಳ ರೂ. 3,11,000 ಸಾಲವನ್ನು ಚುಕ್ತಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮರಣ ನಿಧಿ ಯೋಜನೆಯಡಿ 16 ಸದಸ್ಯರ ಕುಟುಂಬಕ್ಕೆ ರೂ. 3,47,520 ಮರಣ ನಿಧಿಯನ್ನು ನೀಡಲಾಗಿದೆ. ಸರಕಾರದÀ ನಿರ್ದೇಶನದಂತೆ ರೈತರಿಗೆ ಹೈನುಗಾರಿಕೆ, ಮೀನು ಸಾಕಾಣಿಕೆ ಕೃಷಿ ಸಾಲ ಒಳಗೊಂಡಂತೆ ರೂ. 3 ಲಕ್ಷದವರೆಗೆ ಸಾಲ ನೀಡಲಾಗುತ್ತಿದ್ದು, ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸದಸ್ಯರಿಗೆ ಹೆಚ್ಚಿನ ಸವಲತ್ತು ನೀಡುವ ದೃಷ್ಟಿಯಿಂದ ಅಬ್ಬೂರುಕಟ್ಟೆ ಗ್ರಾಮದ ಶಾಖೆಯಲ್ಲಿ ಶಿಥಿಲಗೊಂಡಿರುವ ಸಂಘದ ಗೋದಾಮಿನ ಬದಲಾಗಿ ನಬಾರ್ಡ್ ಸಂಸ್ಥೆಯಿಂದ ರೂ. 1ಕೋಟಿ ಸಾಲವನ್ನು ಪಡೆದು 500 ಮೆಟ್ರಿಕ್ ಸಾಮಥ್ರ್ಯದ ಗೋದಾಮು ನಿರ್ಮಿಸಲಾಗುತ್ತಿದೆ. ಸಂಘ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಂಘಕ್ಕೆ ಒಳಪಟ್ಟ ಬಳಗುಂದ ಶಾಖೆಯಲ್ಲಿ ಕಂಪ್ಯೂಟರ್ ತಂತ್ರಾಂಶ ಅಳವಡಿಸಿದ್ದು, ಪ್ರಸಕ್ತ ವರ್ಷದಿಂದಲೇ ಬ್ಯಾಂಕಿಂಗ್ ವ್ಯವಹಾರ ನಡೆಸಲಾಗುತ್ತಿದೆ. ವರದಿ ಸಾಲಿನಲ್ಲಿ 378.22 ಲಕ್ಷಗಳ ವ್ಯವಹಾರ ನಡೆಸಲಾಗಿದೆ ಎಂದು ಅಧ್ಯಕ್ಷ ಮಾದಪ್ಪ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರುಗಳಾದ ರೂಪಾ ಸತೀಶ್, ಬಿ.ಡಿ. ಮಂಜುನಾಥ್, ಪಿ.ಡಿ. ಮೋಹನ್‍ದಾಸ್, ಎಚ್.ಕೆ. ಚಂದ್ರಶೇಖರ್, ಜಿ.ಬಿ. ಸೋಮಯ್ಯ, ಬಿ.ಎಂ. ಸುರೇಶ್, ಕೆ.ಕೆ. ಚಂದ್ರಿಕ, ಪಿ.ಎ. ಅನಿತಾ, ಬಿ. ಶಿವಪ್ಪ, ಎಂ.ವಿ.ದೇವರಾಜ್, ಬಿ.ಪಿ. ದಿವಾನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪಿ. ರವೀಂದ್ರ ಉಪಸ್ಥಿತರಿದ್ದರು.