ಬೆಂಗಳೂರು, ಡಿ. 13: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ವ್ಯಾಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರು ಹಾಗೂ ನಿರ್ವಾಹಕರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಸಾರಿಗೆ ನೌಕರರ ಒಕ್ಕೂಟದೊಂದಿಗೆ ಸರ್ಕಾರ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಮುಷ್ಕರ ಮುಂದುವರೆಸುವದಾಗಿ ಒಕ್ಕೂಟ ಘೋಷಿಸಿದೆ.
ಸಾರಿಗೆ ನೌಕರರ ಎಂಟು ಬೇಡಿಕೆಗಳನ್ನು ಈಡೇರಿಸುವದಾಗಿ ಸರ್ಕಾರ ಭರವಸೆ ನೀಡಿದರೂ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಪ್ರಮುಖ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಲಿಲ್ಲ. ಈ ಹಿನ್ನೆಲೆಯಲ್ಲಿ ಸಂಧಾನ ಸಭೆಯ ಬಳಿಕ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಿರತ ಸಾರಿಗೆ ನೌಕರರನ್ನು ಉದ್ದೇಶಿಸಿ ಮಾತನಾಡಿದ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್, ಸರ್ಕಾರ ನಡೆಸಿದ ಸಂಧಾನ ಸಭೆ ತೃಪ್ತಿ ನೀಡದ ಕಾರಣ ಮುಷ್ಕರವನ್ನು ಮುಂದುವರೆಸುವದಾಗಿ ಹೇಳಿದರು. ಈ ಹೋರಾಟದ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಹೋರಾಟ ಮುಂದುವರೆಯಲಿದೆ ಎಂದು ಘೋಷಿಸಿದರು. ಈ ಗಂಭೀರ ವಿಚಾರದ
ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಗಮನ ಹರಿಸಬೇಕಿತ್ತು. ಸಾರಿಗೆ ಸಚಿವ ಸವದಿಯವರು ಈ ಕುರಿತು ಸಮರ್ಪಕವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.
ಬಳಿಕ ಮಾತನಾಡಿದ ರಾಜ್ಯ ಖಾಸಗಿ ಬಸ್ ಒಕ್ಕೂಟದ ಪದಾಧಿಕಾರಿಗಳಾದ ನಟರಾಜ್ ಶರ್ಮ ಹಾಗೂ ರಾಧಾಕೃಷ್ಣ ಇವರುಗಳು ಕೂಡ ಸಾರಿಗೆ ಸಚಿವ ಸವದಿ ಅವರ ಕಾರ್ಯವೈಖರಿಯ ಕುರಿತು ಕಿಡಿಕಾರಿದರು. ಕೇವಲ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಮಾತ್ರವಲ್ಲ ಖಾಸಗಿ ಬಸ್‍ಗಳ ಬಗ್ಗೆಯೂ ಸಚಿವ ಸವದಿ ಹಲವು ಬಾರಿ ತಾತ್ಸಾರ ವರ್ತನೆ ತೋರಿದ್ದಾರೆ ಎಂದು ಟೀಕಿಸಿದರು. ಮುಷ್ಕರ ನಿರತ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷರುಗಳ ನಿಲುವಿಗೆ ಬೆಂಬಲ ವ್ಯಕ್ತಪಡಿಸಿ ಮುಷ್ಕರವನ್ನು ಮುಂದುವರಿಸುವದಾಗಿ ಸಾಮೂಹಿಕ ಘೋಷಣೆ ಮಾಡಿದ್ದುದು ಕಂಡು ಬಂದಿತು.
ಗೃಹ ಸಚಿವರಿಂದ ಎಚ್ಚರಿಕೆ
ಇಂದಿನ ಬೆಳವಣಿಗೆ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಈ ಗೊಂದಲಕ್ಕೆ ರೈತ ಮುಖಂಡರೆನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಕಾರಣರಾಗಿದ್ದು, ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಕೋಟ್ಯಂತರ ಜನರ ಸಹಜ ಜೀವನಕ್ಕೆ ಧಕ್ಕೆ ತರುವಂತಹ ಕಾರ್ಯದಲ್ಲಿ ಇಂತವರು ತೊಡಗಿಸಿಕೊಂಡಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದರು. ಸೋಮವಾರ ದಿನ ಪರ್ಯಾಯ ವ್ಯವಸ್ಥೆಗೆ ಸಾರಿಗೆ ಸಚಿವರು ಕ್ರಮಕೈಗೊಳ್ಳಲಿದ್ದಾರೆ ಎಂದು ಮಾಹಿತಿಯಿತ್ತರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಮ್ಮ ಸ್ವ ಪ್ರತಿಷ್ಟೆಗೋಸ್ಕರ ಕೋಡಿಹಳ್ಳಿ ಚಂದ್ರಶೇಖರ್ ಸಂದಾನವನ್ನೂ ಕೂಡ ವಿಫಲಗೊಳಿಸಲು ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ರೈತರ ಪರ ಹೋರಾಡುವುದನ್ನು ಬಿಟ್ಟು ಬೇರೆ ಸಂಘಟನೆಗಳೊಂದಿಗೆ ಸೇರಿಕೊಂಡು ಕರ್ನಾಟಕದ ಜನತೆಗೆ ತೊಂದರೆ ನೀಡುವಂತಹ ನಿರ್ಧಾರಗಳಗೆ ಅವರೇ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.