ಮಡಿಕೇರಿ, ಡಿ. 13: ಜಿಲ್ಲಾ ಕೇಂದ್ರ ಮಡಿಕೇರಿಯ ಕೊಡವ ಸಮಾಜದ ವತಿಯಿಂದ ಇಂದು ಪುತ್ತರಿ ಊರೋರ್ಮೆ ಕಾರ್ಯಕ್ರಮ ಜರುಗಿತು. ಪ್ರಸಕ್ತ ವರ್ಷ ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸಮಾಜದ ವಾರ್ಷಿಕ ಮಹಾಸಭೆ ಯನ್ನು ಈ ಕಾರ್ಯಕ್ರಮದೊಂದಿಗೆ ನಡೆಸಲಾಯಿತು. ಆದರೆ ಈ ಬಾರಿ ಸಮಾಜದಿಂದ ಮಂದ್‍ವರೆಗೆ ವರ್ಷಂಪ್ರತಿ ನಡೆಸುತ್ತಿದ್ದ ಮೆರವಣಿಗೆಯನ್ನು ಕೈಬಿಡಲಾಗಿತ್ತು. ಅಪರಾಹ್ನ ಮಂದ್‍ನಲ್ಲಿ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್ ಮತ್ತಿತರ ಸಾಂಸ್ಕøತಿಕ ಪ್ರದರ್ಶನಗಳು ಸದಸ್ಯರಿಂದ ಜರುಗಿತು.

ಈ ಮುನ್ನ ಕೊಡವ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಜರುಗಿತು. ದೇವಾಟ್ ಪರಂಬು ನರಮೇಧದಲ್ಲಿ ಬಲಿಯಾದ ಹಿರಿಯರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಮೂಲಕ, ಸಮಾಜದ ವಿವಿಧ ಕಾರ್ಯ ಚಟುವಟಿಕೆಗಳು, ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭ ಹಲವಾರು ವರ್ಷದಿಂದ ಸಂಪ್ರದಾಯಬದ್ಧವಾಗಿ ಪುತ್ತರಿ ಸಂದರ್ಭದಲ್ಲಿ ಕುತ್ತಿ ತೆಗೆಯುತ್ತಿರುವ ನಗರದ ಹಿರಿಯರಾದ ಓಡಿಯಂಡ ಸಿ. ಮಾದಪ್ಪ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ಚೋವಂಡ ಕಾಳಪ್ಪ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರುಗಳು ಮಹಾಸಭೆ ಹಾಗೂ ಮಂದ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.